ಬೆಂಗಳೂರು:ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರ ಆಪ್ತೆ ಪವಿತ್ರಾ ಗೌಡ ಸೇರಿದಂತೆ ನಗರ ಪೊಲೀಸರು 13 ಮಂದಿಯನ್ನು ಬಂಧಿಸಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಕೊಲೆ ಮಾಡಿದ್ದಾರೆಂಬ ಆರೋಪದ ಮೇಲೆ ಇವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಲ್ಲಿ ಬಹುತೇಕರು ದರ್ಶನ್ ಬೌನ್ಸರ್‌ಗಳು ಹಾಗೂ ಗಿರಿನಗರ ಪಡ್ಡೆ ಹುಡುಗರಾಗಿದ್ದಾರೆ. ದರ್ಶನ್ ಸ್ನೇಹಿತ ವಿ.ವಿನಯ್, ಆತನ ಮ್ಯಾನೇಜರ್ ಆರ್.ನಾಗರಾಜು, ಎಂ.ಲಕ್ಷ್ಮಣ್, ಕಾರ್ತಿಕ್, ನಂದೀಶ್, ಎಸ್.ಪ್ರದೋಶ್, ಕೆ.ಪವನ್‌ಕುಮಾರ್, ದೀಪಕ್‌ಕುಮಾರ್, ನಿಖಿಲ್ ನಾಯಕ್, ಕೇಶವಮೂರ್ತಿ, ರಾಘವೇಂದ್ರ ಬಂಧಿತ ಇತರ ಆರೋಪಿಗಳು.
ಸುಮನಹಳ್ಳಿ ಬಳಿ ಮೃತದೇಹ
ಶನಿವಾರ ಸಂಜೆ ಸುಮನಹಳ್ಳಿ ಬಳಿ ಮೃತದೇಹ ಪತ್ತೆಯಾಗಿದೆ ಎಂಬ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ್ದ ಪೊಲೀಸರು ಸಂಶಯದ ಮೇಲೆ ಕೊಲೆ ಮೊಕದ್ದಮೆ ದಾಖಲಿಸಿದ್ದರು.
ಪ್ರಕರಣ ದಾಖಲಾಗುತ್ತಿದ್ದಂತೆ ನಾಲ್ವರು ಬಂದು ಶರಣಾಗಿದ್ದರು, ಅವರ ವಿಚಾರಣೆ ನಡೆಸುವ ಸಂದರ್ಭದಲ್ಲಿ ನಟ ದರ್ಶನ್ ಹಾಗೂ ಪವಿತ್ರ ಗೌಡ ಅವರನ್ನು ಬಂಧಿಸಲಾಗಿದೆ.
ಔಷಧ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿ, ದರ್ಶನ್ ಆಪ್ತೆ ಪವಿತ್ರಾ ಗೌಡ ಅವರಿಗೆ ಮೆಸೇಜ್ ಮಾಡಿದ್ದಕ್ಕೆ ಈ ಕೊಲೆ ನಡೆದಿದೆ ಎಂದು ಆರೋಪಿಸಲಾಗಿದೆ.
ಕಾರ್‌ಶೆಡ್‌ನಲ್ಲಿ ಬಂಧಿಸಿ ಹಲ್ಲೆ
ಪವಿತ್ರ ಗೌಡ ನೀಡಿದ ದೂರಿನ ಆಧಾರದ ಮೇಲೆ ದರ್ಶನ್, ತಮ್ಮ ಹುಡುಗರ ಮೂಲಕ ರೇಣುಕಾಸ್ವಾಮಿಯನ್ನು ಕರೆಸಿಕೊಂಡು ಆರ್‌ಆರ್‌ನಗರದ ಮನೆಯ ಕಾರ್‌ಶೆಡ್‌ನಲ್ಲಿ ಬಂಧಿಸಿ ಆತನ ಮೇಲೆ ಹಲ್ಲೆ ಮಾಡಿದ್ದಾರೆ.
ಕೊಲೆಯಾದ ಸಂದರ್ಭದಲ್ಲಿ ಪವಿತ್ರಗೌಡ ಕೂಡ ಜೊತೆಯಲ್ಲಿದ್ದು ರೇಣುಕಾಸ್ವಾಮಿ ಮೇಲೆ ಹಲ್ಲೆಗೆ ಪ್ರಚೋಧನೆ ನೀಡುತ್ತಿದ್ದರಂತೆ.
ಆತನ ಮೇಲೆ ಮನಬಂದಂತೆ ದರ್ಶನ್ ಥಳಿಸಿದ ಕಾರಣ ಆತ ಸಾವಿಗೀಡಾಗಿದ್ದಾನೆ, ನಂತರ ಗಿರಿನಗರದ ಹುಡುಗರನ್ನು ಕರೆಸಿಕೊಂಡು ಆತನ ಮೃತದೇಹವನ್ನು ಕಾಮಾಕ್ಷಿಪಾಳ್ಯ ಮೋರಿಯಲ್ಲಿ ಎಸೆದಿದ್ದಾರೆ.
ಮೃತದೇಹ ಸಿಕ್ಕಾಗ, ಆತನ ಮೊಬೈಲ್ ಪರಿಶೀಲಿಸಿದಾಗ ಆರ್‌ಆರ್‌ನಗರದ ದರ್ಶನ್ ಮನೆ ಸ್ಥಳ ತೋರಿಸಿದೆ.
ಮೈಸೂರಿನಲ್ಲಿ ದರ್ಶನ್ ವಶಕ್ಕೆ
ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಂತೆ ದರ್ಶನ್ ಮೈಸೂರಿಗೆ ತೆರಳಿದ್ದಾರೆ, ನಗರ ಪೊಲೀಸರು ತಡರಾತ್ರಿ ಮೈಸೂರಿಗೆ ತೆರಳಿ ದರ್ಶನ್ ಇದ್ದ ಸ್ಥಳದಿಂದ ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣ ಸಂಬಂಧ ಪಟ್ಟಣಗೆರೆ ನಿವಾಸಿ ವಿನಯ್ ಸೇರಿ ಹಲವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ದರ್ಶನ್ ಕೊಲೆ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ದರ್ಶನ್ ಆಪ್ತೆ ಪವಿತ್ರ ಗೌಡ ಎಂಬುವರ ಬಗ್ಗೆ ರೇಣುಕಾಸ್ವಾಮಿ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಮೆಸೇಜ್ ಗಳನ್ನು ಹಾಕಿದ್ದರು ಎನ್ನಲಾಗಿದೆ. ಇದೇ ವಿಚಾರವಾಗಿ ಆತನ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡಲಾಗಿದೆ.
ಬಲವಾದ ಮಾಹಿತಿ
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲವಾದ ಮಾಹಿತಿ ಹಿನ್ನೆಲೆಯಲ್ಲೇ ಪೊಲೀಸರು ದರ್ಶನ್ ಅವರನ್ನು ಬಂಧಿಸಿದ್ದಾರೆ.
ದರ್ಶನ್ ನೇರವಾಗಿ ಭಾಗಿಯಾಗಿದ್ದಾರೆಯೇ, ಇಲ್ಲವೇ, ಯಾವ ಕಾರಣಕ್ಕೆ ಕೊಲೆಯಾಗಿದೆ, ಅವರ ಹೆಸರು ಏಕೆ ಬಂದಿದೆ ಎಂಬುದು ತನಿಖೆ ನಂತರ ಗೊತ್ತಾಗಲಿದೆ.
ಯಾರು ಎಷ್ಟೇ ದೊಡ್ಡವರಾದರೂ ಕಾನೂನಿನ ಚೌಕಟ್ಟಿಗೆ ಒಳಗಾಗಬೇಕಾಗುತ್ತದೆ ಎಂದು ತಿಳಿಸಿದ್ದಾರೆ.