ಬೆಂಗಳೂರು:ವರ್ಗಾವಣೆ ವೇಳೆ ತೆರಿಗೆ ಸಂಗ್ರಹದಲ್ಲಿನ ಕಾರ್ಯಕ್ಷಮತೆಯನ್ನು ಮಾನದಂಡವಾಗಿ ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ವಾಣಿಜ್ಯ ತೆರಿಗೆ ಮತ್ತು ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗುರಿ ಸಾಧಿಸದಿದ್ದರೆ ಶಿಸ್ತು ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ, ವರ್ಗಾವಣೆಗೆ ಸಂಬಂಧಿಸಿದಂತೆ ಬೇರೆ ಯಾವ ಪ್ರಭಾವಕ್ಕೂ ಮಣೆ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ತಿಂಗಳಿಗೆ 2 ಬಾರಿ ಸಭೆ ಕಡ್ಡಾಯ
ವರ್ಗಾವಣೆಗೆ ನಿಮ್ಮ ಕಾರ್ಯಕ್ಷಮತೆಯೇ ಮಾನದಂಡವಾಗಿರುತ್ತದೆ, ಅಂದಾಜು, ಜಾರಿ, ಮೇಲ್ಮನವಿ ಸಮನ್ವಯ ಸಭೆ ತಿಂಗಳಿಗೆ 2 ಬಾರಿ ಕಡ್ಡಾಯವಾಗಿ ನಡೆಸಬೇಕು, ಕಾರ್ಯಯೋಜನೆ ಸಿದ್ಧಪಡಿಸಬೇಕು.
ಮೇಲ್ಮನವಿ ಪ್ರಕರಣಗಳನ್ನು 3 ತಿಂಗಳೊಳಗೆ ವಿಲೇವಾರಿ ಮಾಡಬೇಕು, ವಿಳಂಬ ಮಾಡಿದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು, ಐಜಿಎಸ್‌ಟಿ ನಕಾರಾತ್ಮಕ ಸೆಟಲ್‌ಮೆಂಟ್ ಆಗುವ ಕಡೆ ಇತರೆ ಸರಕುಗಳ ಮೇಲಿನ ತೆರಿಗೆ ಸಂಗ್ರಹ ಚುರುಕುಗೊಳಿಸಬೇಕು.
ಬೆಂಗಳೂರಿನಲ್ಲಿ ಹೆಚ್ಚು ಮೇಲ್ಮನವಿಗಳು ದಾಖಲಾಗುತ್ತಿದ್ದು, ಇವುಗಳ ವಿಲೇವಾರಿಗೆ ಹೆಚ್ಚುವರಿ ಜಂಟಿ ಆಯುಕ್ತರ ಹುದ್ದೆ ಮಂಜೂರಾಗಿದ್ದು ಜುಲೈ 1 ರಿಂದ ಜಾರಿಗೆ ಬರಲಿದೆ, ವೃತ್ತಿ ತೆರಿಗೆ ಸಂಗ್ರಹವನ್ನೂ ಚುರುಕುಗೊಳಿಸಲು ಗುರಿ ನಿಗದಿ ಪಡಿಸಬೇಕು.
ಸೆಪ್ಟೆಂಬರ್ ಮೊದಲ ವಾರದಲ್ಲಿ ಮತ್ತೊಮ್ಮೆ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು, ಆ ವೇಳೆಗೆ ಗುರಿ ತಲುಪಿರಬೇಕು ಎಂದು ಎಚ್ಚರಿಸಿದರು.