7ನೇ ವೇತನ ಆಯೋಗ ಶಿಫಾರಸು ಜಾರಿ ನಿರ್ಧಾರ ?
ಬೆಂಗಳೂರು:ರಾಜ್ಯ ಸರ್ಕಾರಿ ನೌಕರರ ಸಮುದಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಸಿಹಿ ಸುದ್ದಿ ನೀಡುವ ನಿರೀಕ್ಷೆ ಇದೆ.
ಏಳನೇ ರಾಜ್ಯ ವೇತನ ಆಯೋಗದ ಶಿಫಾರಸಿನಂತೆ ವೇತನ ಭತ್ಯೆ ಹಾಗೂ ಸೌಲಭ್ಯಗಳ ಪರಿಷ್ಕರಣೆ ಮಾಡುವ ಸಂಬಂಧ ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಸಚಿವ ಸಂಪುಟದ ಕಾರ್ಯಸೂಚಿಯ ಮೊದಲ ಪಟ್ಟಿಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿಲ್ಲ, ಆದರೆ ಸಭೆ ಸೇರುವುದಕ್ಕೂ ಮುನ್ನ ಹೆಚ್ಚುವರಿಯಾಗಿ ಬರುವ ಕಾರ್ಯಸೂಚಿಯಲ್ಲಿ ಈ ವಿಷಯ ಸೇರ್ಪಡೆಯಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಶೇಕಡ 8ರಿಂದ 10.5ರಷ್ಟು ಹೆಚ್ಚಳ ನಿರೀಕ್ಷೆ
ಶೇಕಡ 8ರಿಂದ 10.5ರಷ್ಟು ವೇತನ ಹೆಚ್ಚಳ ಮಾಡುವ ನಿರೀಕ್ಷೆಯನ್ನು ನೌಕರರ ವೃಂದ ಇಟ್ಟುಕೊಂಡಿದೆ.
ಲೋಕಸಭಾ ಚುನಾವಣಾ ನೀತಿ ಸಂಹಿತೆ ಘೋಷಣೆ ಆಗುವ ಮುನ್ನ ಸಲ್ಲಿಕೆಯಾಗಿದ್ದ 7ನೇ ವೇತನ ಆಯೋಗದ ಶಿಫಾರಸುಗಳನ್ನು ಸ್ವೀಕರಿಸಿದ್ದ ಮುಖ್ಯಮಂತ್ರಿ ಅವರು, ಕೂಲಂಕಷವಾಗಿ ಅಧ್ಯಯನ ಮಾಡಿ ವರದಿ ನೀಡಲು ಹಣಕಾಸು ಇಲಾಖೆಗೆ ಸೂಚಿಸಿದ್ದರು.
ತನ್ನ ಸರ್ಕಾರಿ ನೌಕರರಿಗೆ ೭ನೇ ವೇತನ ಆಯೋಗ ಶಿಫಾರಸು ಜಾರಿಗೊಳಿಸಲು ಮುಖ್ಯಮಂತ್ರಿ ಅವರು ಮುಂಗಡಪತ್ರದಲ್ಲಿ 15,431 ಕೋಟಿ ರೂ. ಮೀಸಲಿರಿಸಿದ್ದಾರೆ.
ಶೇಕಡ 25ರಷ್ಟು ಏರಿಕೆಗೆ ಶಿಫಾರಸು
ಇದರ ಆಧಾರದ ಮೇಲೆ ಹಣಕಾಸು ಇಲಾಖೆ ಆಯೋಗ ಮಾಡಿರುವ ಶೇಕಡ 27.5ರ ಶಿಫಾರಸಿನ ಬದಲು ಶೇಕಡ 25ರಷ್ಟು ಏರಿಕೆಗೆ ಶಿಫಾರಸು ಮಾಡಿದೆ ಎಂದು ಹೇಳಲಾಗಿದೆ.
ಬಸವರಾಜ ಬೊಮ್ಮಾಯಿ ಅಧಿಕಾರದಿಂದ ಕೆಳಗಿಳಿಯುವುದಕ್ಕೂ ಮುನ್ನ ಶೇಕಡ 17ರಷ್ಟು ಮಧ್ಯಂತರ ವೇತನ ಹೆಚ್ಚಳ ಮಾಡಿದ್ದರು. ಇನ್ನು ಹಾಲಿ ಸರ್ಕಾರ ಉಳಿದ ಶೇಕಡ 8.5ರಷ್ಟು ಹೆಚ್ಚಳ ಮಾಡಬೇಕಿದೆ.
ಕಳೆದ ಮಾರ್ಚ್ 16ರಂದು ಆಯೋಗ ನೀಡಿದ ಶಿಫಾರಸಿನಂತೆ ಸರ್ಕಾರಿ ನೌಕರರಿಗೆ ಶೇಕಡ 31ರಷ್ಟು ತುಟ್ಟಿ ಭತ್ಯೆ ವಿಲೀನಗೊಳಿಸಿ ಶೇಕಡ 27.50 ಫಿಟ್‌ಮೆಂಟ್ ನೀಡುವ ಮೂಲಕ ಕನಿಷ್ಠ ಮೂಲವೇತನವನ್ನು 10,000 ರೂ.ಗಳಷ್ಟು ಏರಿಕೆ ಮಾಡಲು ಸಲಹೆ ನೀಡಿತ್ತು.
ಕನಿಷ್ಠ ಮೂಲವೇತನ 17 ಸಾವಿರ ರೂ.ಗಳಿಂದ 27 ಸಾವಿರ ರೂ.ಗೆ ಏರಿಕೆ ಮಾಡುವಂತೆಯೂ ಗರಿಷ್ಠ ವೇತನ 2,41,200 ರೂ.ಗೆ ನಿಗದಿ ಪಡಿಸಬೇಕೆಂದು ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.
ಮಾಜಿ ಮುಖ್ಯಕಾರ್ಯದರ್ಶಿ ಕೆ.ಸುಧಾಕರ್ ನೇತೃತ್ವದ ವೇತನ ಆಯೋಗವು ನೌಕರರ ಅನುಕೂಲಕ್ಕಾಗಿ 30 ಶಿಫಾರಸುಗಳಲ್ಲಿ ಹಲವು ಸೌಲಭ್ಯಗಳಿಗೆ ಶಿಫಾರಸು ಮಾಡಿದೆ.