ಬೆಂಗಳೂರು:ಕೇಂದ್ರ ಸಂಪುಟದಲ್ಲಿನ ಕಾರ್ಯಭಾರದ ಹಿನ್ನೆಲೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ತೆರವುಗೊಳಿಸಲಿದ್ದಾರೆ.
ಅಷ್ಟೇ ಅಲ್ಲ, ಮಂಡ್ಯದಿಂದ ಲೋಕಸಭೆಗೆ ಆಯ್ಕೆಗೊಂಡಿರುವುದರಿಂದ ಅವರು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೂ ಇನ್ನು ಎರಡು ದಿನಗಳೊಳಗಾಗಿ ರಾಜೀನಾಮೆ ನೀಡಬೇಕಾಗಿದೆ.
ಶಾಸಕಾಂಗ ಪಕ್ಷದ ನಾಯಕ
ಶಾಸಕ ಸ್ಥಾನ ತೆರವಾದ ಬೆನ್ನಲ್ಲೇ ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕತ್ವವೂ ತೆರವಾಗಲಿದ್ದು ಆ ಸ್ಥಾನಕ್ಕೆ ಶಾಸಕರ ಸಭೆ ಕರೆದು ನಾಯಕನ ಆಯ್ಕೆ ಮಾಡಬೇಕಿದೆ.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಹಿರಿಯ ಸದಸ್ಯ ಜಿ.ಟಿ.ದೇವೇಗೌಡರನ್ನು ನೇಮಿಸುವ ಬಗ್ಗೆ ಚರ್ಚೆ ನಡೆದಿದೆ, ಆದರೆ, ಅವರು ಈಗಾಗಲೇ ಪಕ್ಷದ ಕೋರ್ ಕಮಿಟಿ ಅಧ್ಯಕ್ಷರಾಗಿದ್ದಾರೆ.
ದೇವೇಗೌಡರನ್ನು ಹೊರತುಪಡಿಸಿದರೆ ಎಚ್.ಡಿ.ರೇವಣ್ಣ ಅವರೇ ಹಿರಿಯ ಸದಸ್ಯರು, ಆದರೆ, ಪ್ರಸಕ್ತ ಸನ್ನಿವೇಶದಲ್ಲಿ ಅವರಿಗೆ ಯಾವುದೇ ಅಧಿಕಾರವನ್ನು ಪಕ್ಷ ನೀಡುವ ಸಾಧ್ಯತೆ ಇಲ್ಲ.
ಹೀಗಾಗಿ ಜಿ.ಟಿ.ದೇವೇಗೌಡರಿಗೇ ಶಾಸಕಾಂಗ ಪಕ್ಷದ ನಾಯಕತ್ವ ದೊರೆಯುವ ಸಾಧ್ಯತೆ ಇದೆ.
ಹೆಸರುಗಳು ಚಲಾವಣೆಯಲ್ಲಿ
ಇನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕುರುಬ ಸಮುದಾಯಕ್ಕೆ ಸೇರಿದ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ ಇಲ್ಲವೇ ಹಾಲಿ ಶಾಸಕ ಸುರೇಶ್ ಬಾಬು ಅವರ ಹೆಸರುಗಳು ಚಲಾವಣೆಯಲ್ಲಿವೆ.
ಅಲ್ಲದೆ, ಯುವ ಶಾಸಕ ಶರಣಗೌಡ ಕಂದಕೂರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ.
ಕೇಂದ್ರ ಸಚಿವರಾದ ನಂತರ ಕುಮಾರಸ್ವಾಮಿ ರಾಜ್ಯಕ್ಕೆ ಇನ್ನೂ ಭೇಟಿ ನೀಡಿಲ್ಲ, ಅವರು ಶುಕ್ರವಾರ ನಗರಕ್ಕೆ ಬರಲಿದ್ದು ಆ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರೊಂದಿಗೆ ಚರ್ಚಿಸಿ, ತಮ್ಮಿಂದ ತೆರವಾಗುತ್ತಿರುವ ಸ್ಥಾನಕ್ಕೆ ನೇಮಕದ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.