ಆಡಳಿತದಲ್ಲಿ ಚುರುಕು ತರಲು ಕಟ್ಟುನಿಟ್ಟಿನ ಆದೇಶ
ಬೆಂಗಳೂರು:ಸರ್ಕಾರದಲ್ಲಿ ಆಮೂಲಾಗ್ರ ಬದಲಾವಣೆ ತಂದು ಜನಪರ ಮತ್ತು ಜನಸ್ನೇಹಿ ಆಡಳಿತ ನೀಡಲು ರಾಜ್ಯ ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ.
ಆಡಳಿತದಲ್ಲಿ ಮತ್ತಷ್ಟು ಬಿಗಿ ಕ್ರಮ ಕೈಗೊಂಡು ಅರ್ಜಿಗಳ ವಿಲೇವಾರಿಯನ್ನು ತ್ವರಿತವಾಗಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯಲ್ಲಿ ಸಚಿವರು ಮತ್ತು ಮುಖ್ಯಕಾರ್ಯದರ್ಶಿಗಳಿಗೆ ಆದೇಶ ಮಾಡಿದ್ದಾರೆ.
ಅಧಿಕಾರಿಗಳ ವಿರುದ್ಧ ಕ್ರಮ
ಇನ್ನು ಮುಂದೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಿ, ಕಡತಗಳಿಗೆ ನಿಗದಿ ಸಮಯದೊಳಗೆ ವಿಲೇವಾರಿ ಆಗಿ ಅಭಿವೃದ್ಧಿ ಕೆಲಸಗಳಿಗೆ ತಕ್ಷಣವೇ ಚಾಲನೆ ನೀಡುವಂತೆ ಆದೇಶಿಸಿದ್ದಾರೆ.
ಕೆಲವು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸಭೆಯಲ್ಲೇ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿ ಅವರು, ಸಣ್ಣ ಪುಟ್ಟ ಕೆಲಸಗಳಿಗೂ ಜನರು ರಾಜಧಾನಿಗೆ ಬರುವುದಕ್ಕೆ ಅವಕಾಶ ಮಾಡಿಕೊಡಬೇಡಿ, ಸ್ಥಳೀಯವಾಗೇ ಸಮಸ್ಯೆಗಳನ್ನು ಪರಿಹರಿಸಿ ಎಂದಿದ್ದಾರೆ.
ಲೋಕಸಭಾ ಚುನಾವಣೆಯ ಫಲಿತಾಂಶ ಮತ್ತು ಗ್ಯಾರಂಟಿ ಯೋಜನೆಗಳ ಅನುಷ್ಟಾನವನ್ನೇ ಮುಂದಿಟ್ಟುಕೊಂಡು ಮಾತನಾಡಿದ ಮುಖ್ಯಮಂತ್ರಿ, ಕಳೆದ ಒಂದು ವರ್ಷದಲ್ಲಿ ನಡೆದಿರುವ ಸರ್ಕಾರಕ್ಕೂ ಮುಂದಿನ ಆಡಳಿತಕ್ಕೂ ವ್ಯಾತ್ಯಾಸ ಕಾಣಬೇಕು.
ಕೆಲಸ ಜನಪರ ಮತ್ತು ಜನಸ್ನೇಹಿ ಆಗಿರಲಿ
ಯಾವುದೇ ಕೆಲಸ ತೆಗೆದುಕೊಂಡರೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ, ನೀವು ಮಾಡುವ ಕಾರ್ಯ ಜನಪರ ಮತ್ತು ಜನಸ್ನೇಹಿ ಆಗಿರಬೇಕು.
ಒಟ್ಟಾರೆ ಮುಂದಿನ ದಿನಗಳ ಆಡಳಿತ ವ್ಯವಸ್ಥೆ ಪೂರ್ಣ ಬದಲಾವಣೆ ಆಗಬೇಕು, ಇದಕ್ಕೆ ಏನು ಕ್ರಮ ಕೈಗೊಳ್ಳುತ್ತೀರೋ ಕೈಗೊಳ್ಳಿ ಎಂದು ಸಚಿವರು ಮತ್ತು ಮುಖ್ಯಕಾರ್ಯದರ್ಶಿ ಅವರಿಗೆ ತಿಳಿಸಿದ್ದಾರೆ.
ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಜನಸ್ನೇಹಿ ಮತ್ತು ಜನಪರ ಆಡಳಿತ ತರಲು ತೀರ್ಮಾನಿಸಲಾಗಿದೆ.
ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಇಲ್ಲ
ಇನ್ನು ಸರ್ಕಾರದ ಮುಂದೆ ಬರುವ ಅರ್ಜಿಗಳ ವಿಲೇವಾರಿ ವಿಳಂಬವಾಗುವುದಿಲ್ಲ ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ತೋರುವಂತಿಲ್ಲ.
ಇದೇ ಕಾರಣಕ್ಕಾಗಿ ರಾಜ್ಯ ಸಚಿವ ಸಂಪುಟ ವಿವಿಧ ಇಲಾಖೆಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು 147 ಟೆಂಡರ್‌ಗಳನ್ನು ಕರೆದಿದ್ದು ಅದರಲ್ಲಿ ಏಳು ಕಾಮಗಾರಿಗಳು ಮಾತ್ರ ಮುಕ್ತಾಯವಾಗಿವೆ ಎಂದರು.
ಸಭೆ, ಟೆಂಡರ್ ಅರ್ಜಿಗಳಿಗೆ ಸಂಬಂಧಿಸಿದಂತೆಯೂ ಚರ್ಚೆ ನಡೆಸಿದ್ದಲ್ಲದೆ, ಇನ್ನು ಒಂದು ತಿಂಗಳೊಳಗಾಗಿ ಎಲ್ಲಾ ಗುತ್ತಿಗೆ ಕೆಲಸಗಳನ್ನು ಪ್ರಾರಂಭಿಸುವಂತೆ ಮುಖ್ಯಮಂತ್ರಿ ಅವರು ಆದೇಶ ಮಾಡಿದ್ದಾರೆ.
ಆಡಳಿತ ಚುರುಕಿಗೆ ಒತ್ತು
ಕಳೆದ ತಿಂಗಳುಗಳ ಹಿಂದೆಯೇ ಕಾಮಗಾರಿ ಕೈಗೆತ್ತಿಕೊಳ್ಳಲು ಅನುಮತಿ ನೀಡಿದ್ದರೂ ಅಭಿವೃದ್ಧಿ ಕೈಗೊಳ್ಳದಿರುವುದಕ್ಕೆ ಕಾರಣಗಳನ್ನು ಪಡೆದ ಮುಖ್ಯಮಂತ್ರಿ ಅವರು, ಆಡಳಿತದಲ್ಲಿ ಮತ್ತಷ್ಟು ಚುರುಕಿಗೆ ಒತ್ತು ನೀಡುವಂತೆ ಮುಖ್ಯಕಾರ್ಯದರ್ಶಿಗಳಿಗೆ ಆದೇಶಿಸಿದರು.
ಕಾಮಗಾರಿ ವಿಷಯದಲ್ಲಿ ಇನ್ನೂ 97 ಪ್ರಸ್ತಾವನೆಗಳು ಟೆಂಡರ್ ಹಂತದಲ್ಲಿವೆ, 19 ಪರಿಶೀಲನೆಯಲ್ಲಿವೆ, 18 ಕಾರ್ಯಾದೇಶವಾಗಿವೆ. ಏಳು ಮಾತ್ರ ಪೂರ್ಣಗೊಂಡಿವೆ.
ಸರ್ಕಾರ ಅನುಮತಿ ನೀಡಿದರೂ ವಿವಿಧ ಇಲಾಖೆಗಳು ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಂಡಿಲ್ಲ ಎಂದು ಪಾಟೀಲ್ ಮಾಹಿತಿ ನೀಡಿದರು.