ಬೆಂಗಳೂರು:ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರುಗಳ ರಾಜಕೀಯ ಷಡ್ಯಂತ್ರದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸುವ ಹುನ್ನಾರ ನಡೆದಿದೆ ಎಂದು ರಾಜ್ಯ ಬಿಜೆಪಿ ಇಂದಿಲ್ಲಿ ಗುರುತರ ಆರೋಪ ಮಾಡಿದೆ.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಮ್ಮ ಸರ್ಕಾರದ ವಿರುದ್ಧ 40% ಕಮಿಷನ್ ಸೇರಿದಂತೆ ಮಾಡಿರುವ ಸುಳ್ಳು ಆರೋಪಗಳಿಗೆ ಸಂಬಂಧಿಸಿದಂತೆ ಬಿಜೆಪಿ ದಾಖಲಿಸಿದ ಮಾನಹಾನಿ ಮೊಕದ್ದಮೆಯಡಿ ರಾಹುಲ್ ಗಾಂಧಿ ಅವರನ್ನು ಕಟಕಟೆಗೆ ಕರೆಸಿದ್ದಕ್ಕೆ ಸಿದ್ದರಾಮಯ್ಯ ಸರ್ಕಾರ ರಾಜಕೀಯ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಆರೋಪಿಸಿದೆ.
ಬಿಜೆಪಿ ಮೇಲಿನ ಆರೋಪಗಳಿಗೆ ಶಿಕ್ಷೆ ಭಯ
ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ಕೊಡಗು-ಮೈಸೂರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ವಕ್ಷೇತ್ರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳಲ್ಲಿನ ಸೋಲು, ಕಾಂಗ್ರೆಸ್‌ಗೆ ಗ್ಯಾರಂಟಿ ಯೋಜನೆಗಳು ಕೈಕೊಟ್ಟಿರುವುದು, ಅಲ್ಲದೆ, ಬಿಜೆಪಿ ಮೇಲೆ ಮಾಡಿರುವ ಆರೋಪಗಳಿಗೆ ಅವರಿಗೆ ಶಿಕ್ಷೆ ಆಗುತ್ತದೆ ಎಂಬ ಭಯದಿಂದ ಇಂತಹ ಕೃತ್ಯಕ್ಕೆ ಇಳಿದಿದ್ದಾರೆ.
ಕಳೆದ ಮೂರು ತಿಂಗಳಿಂದ ಯಡಿಯೂರಪ್ಪ ಅವರ ವಿಚಾರವನ್ನು ಕೈಗೆತ್ತಿಕೊಳ್ಳದೆ, ಈಗ ಏಕಾಏಕಿ ತೆಗೆದುಕೊಂಡು ಅವರ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಸಿ ಜೈಲಿಗೆ ಕಳುಹಿಸಲು ಪಿತೂರಿ ನಡೆಸಿದೆ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ವಿರುದ್ಧ ಪ್ರಕರಣ ದಾಖಲಾದ ಸಂದರ್ಭದಲ್ಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ದೂರು ದಾಖಲಿಸಿರುವ ವ್ಯಕ್ತಿ ಮಾನಸಿಕ ಅಸ್ವಸ್ಥತೆಯಿಂದ ಇದ್ದಂತಿದೆ, ಆಕೆ 53 ಗಣ್ಯರ ಮೇಲೆ ಇದೇ ರೀತಿ ದೂರು ನೀಡಿದ್ದಾರೆ ಎಂದಿದ್ದರು.
‘ಬಿ’ ರಿಪೋರ್ಟ್ ವೇಳೆ ಷಡ್ಯಂತ್ರ
ಪ್ರಕರಣಕ್ಕೆ ಸಂಬಂಧಿಸಿದಂತೆ ’ಬಿ’ ರಿಪೋರ್ಟ್ ಹಾಕುವ ಸಂದರ್ಭದಲ್ಲಿ ರಾಹುಲ್ ಗಾಂಧಿ ಹಾಗೂ ಸುರ್ಜೇವಾಲ ಅವರು ಮಧ್ಯಪ್ರವೇಶ ಮಾಡಿ ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಲು ಷಡ್ಯಂತ್ರ ಮಾಡಿದ್ದಾರೆ.
ಗೃಹ ಸಚಿವರ ಅಂದಿನ ಹೇಳಿಕೆ ಹಾಗೂ ಇಂದು ನೀಡುತ್ತಿರುವ ಹೇಳಿಕೆಗಳನ್ನು ಗಮನಿಸಿದರೆ, ಇದರ ಹಿಂದೆ ಯಾರಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ, ಅಲ್ಲದೆ ನಮಗೆ ಅಧಿಕಾರಿಗಳೂ ಮಾಹಿತಿ ನೀಡಿದ್ದಾರೆ, ಅದನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದರು.
ಯಡಿಯೂರಪ್ಪ ವಿರುದ್ಧ 2024ರ ಫೆಬ್ರವರಿ 2ರಂದು ಪ್ರಕರಣ ನಡೆದಿದೆ ಎಂದಿದೆ, ಆದರೆ, ಅವರ ವಿರುದ್ಧ ಮಾರ್ಚ್ 14ರಂದು ದೂರು ದಾಖಲಾಯಿತು.
ಏಪ್ರಿಲ್ 12ರಲ್ಲೇ ಯಡಿಯೂರಪ್ಪ ಹೇಳಿಕೆ
ಏಪ್ರಿಲ್ 12ರಂದು ಯಡಿಯೂರಪ್ಪ ಅವರು ಸಿಐಡಿ ಮುಂದೆ ಹೇಳಿಕೆ ನೀಡಿದ್ದಾರೆ. ಮೂರು ತಿಂಗಳಿಂದ ಏನೂ ಆಗದ ವಿಚಾರ ಏಕಾಏಕಿ ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲು ಅನುಮತಿ ಪಡೆಯಲಾಗಿದೆ.
ಯಡಿಯೂರಪ್ಪ ಅವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ, ಕಾಂಗ್ರೆಸ್ ಸರ್ಕಾರ ಯಡಿಯೂರಪ್ಪ ಅವರನ್ನು ಮಾನಸಿಕವಾಗಿ ಕುಗ್ಗಿಸಲು ಹೊರಟಿದೆ.
ಕಾಂಗ್ರೆಸ್ ಮಾಡುತ್ತಿರುವ ರಾಜಕೀಯ ಅವರಿಗೇ ತಿರುಗುಬಾಣವಾಗಲಿದೆಯೇ ಹೊರತು ಅದರಿಂದ ಯಾವುದೇ ರಾಜಕೀಯ ಲಾಭ ಸಿಗುವುದಿಲ್ಲ ಎಂದು ಸಿ.ಟಿ.ರವಿ ಎಚ್ಚರಿಸಿದರು.