ಕಾಂಗ್ರೆಸ್ ಸರ್ಕಾರದಿಂದ ಅಧಿಕಾರ ದುರುಪಯೋಗ
ಬೆಂಗಳೂರು: ದ್ವೇಷ ಮತ್ತು ನೀಚ ರಾಜಕಾರಣವನ್ನು ಕಾಂಗ್ರೆಸ್‌ನವರು ಬಿಡದಿದ್ದರೆ ಮುಂದೆ ನಾಶವಾಗಿ ಹೋಗುತ್ತಾರೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಸಿದ್ದಾರೆ.
ನಮ್ಮ ಕುಟುಂಬವನ್ನು ಮುಗಿಸಿಯಾಯಿತು. ಇನ್ನು ಪ್ರಬಲ ರಾಜಕಾರಣಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಗಿಸಬೇಕೆಂದು ಕಾಂಗ್ರೆಸ್ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ನಗರಕ್ಕೆ ಬಂದ ಕುಮಾರಸ್ವಾಮಿ, ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಲೋಕಸಭಾ ಚುನಾವಣೆಯಲ್ಲಿ ಆದ ಅಪಮಾನ ತಪ್ಪಿಸಿಕೊಳ್ಳಲು ಇಂತಹ ನೀಚ ರಾಜಕಾರಣಕ್ಕೆ ಇಳಿದಿದ್ದಾರೆ.
ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ 82 ವರ್ಷದ ಯಡಿಯೂರಪ್ಪ ಅವರನ್ನು ಬಂಧಿಸಲು ವಾರೆಂಟ್ ಹೊರಡಿಸಿರುವುದು ಎಂತಹ ನೀಚತನ.
ನಾಲ್ಕು ತಿಂಗಳಿಂದ ಪ್ರಕರಣದ ಬಗ್ಗೆ ಚಕಾರವೆತ್ತದ ಸಿದ್ದರಾಮಯ್ಯ ಸರ್ಕಾರ ಇದೀಗ ಏಕಾಏಕಿ ಅವರನ್ನು ಬಂಧಿಸಲು ಮುಂದಾಗಿದೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬವನ್ನು ಮುಗಿಸಿಯಾಯಿತು. ಇನ್ನು ಯಡಿಯೂರಪ್ಪ ಕುಟುಂಬವನ್ನು ಮುಗಿಸಲು ಪೊಲೀಸರು ಮತ್ತು ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದೀರಿ, ನಿಮಗೆ ನಾಚಿಕೆ ಇಲ್ಲವೇ ಎಂದು ಪ್ರಶ್ನಿಸಿದರು.
ಪೋಕ್ಸೋ ಪ್ರಕರಣದಲ್ಲಿ ಹಿಂದಿನ ಎರಡು ಘಟನೆಗಳನ್ನು ಇಬ್ಬರು ಸ್ವಾಮೀಜಿಗಳನ್ನು 24 ಗಂಟೆಯೊಳಗೆ ಬಂಧಿಸಿದ್ದೀರಿ, ಯಡಿಯೂರಪ್ಪ ಪ್ರಕರಣದಲ್ಲಿ ಏಕೆ ನಿಧಾನ ಮಾಡಿದಿರಿ.
ನಾಲ್ಕು ತಿಂಗಳ ನಂತರ ಜ್ಞಾನೋದಯವಾಯಿತೇ? ನಿಮ್ಮ ರಾಜಕೀಯ ದಾಳಗಳಿಗೆ ಬಗ್ಗಲಿಲ್ಲ, ಬಿಜೆಪಿ-ಜೆಡಿಎಸ್ ಮೈತ್ರಿ ಸಹಿಸಲಾಗದೆ ಇಂತಹ ಕೃತ್ಯಕ್ಕೆ ಇಳಿದಿದ್ದೀರಿ.
ಎರಡು ಪಕ್ಷಗಳು ಒಂದಾದರೆ ನಿಮಗೆ ಮುಂದೆ ನೆಲೆ ಇಲ್ಲ ಎಂದು ಮೈತ್ರಿಗೆ ಧಕ್ಕೆ ತರಲು ಹೊರಟಿದ್ದೀರಿ.
ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಒಂದಾಗಿದ್ದಾರೆ, ಮುಂದೆ ನಿಮಗೆ ನೆಲೆ ಇಲ್ಲದಂತೆ ಮಾಡುತ್ತಾರೆ ಎಂದು ತಿಳಿದು ಇಂತಹ ಕೃತ್ಯಗಳನ್ನು ಮಾಡುತ್ತಿದ್ದೀರಿ.
ನಮ್ಮ ಪಕ್ಷದ ಕಾರ್ಯಕರ್ತರ 16 ವರ್ಷಗಳ ಶ್ರಮದ ನಂತರ ನಮಗೆ ಪ್ರತಿಫಲ ದೊರೆತಿದೆ, ಮೋದಿ ಅವರು ನನಗೆ ದೊಡ್ಡ ಕಾರ್ಯಭಾರ ವಹಿಸಿ ಕೆಲಸ ಮಾಡು ಎಂದಿದ್ದಾರೆ.
ನಿಮ್ಮ ರೀತಿ ನಾನು ದ್ವೇಷದ ರಾಜಕಾರಣ ಮಾಡುವುದಿಲ್ಲ, ರಾಜ್ಯದ ಯಾವುದೇ ಸಮಸ್ಯೆ ಇದ್ದರೂ ಮಂತ್ರಿಗಳ ಜೊತೆ ಸಂಬಂಧಪಟ್ಟ ಇಲಾಖೆಗಳಿಗೆ ತೆರಳಿ ಅದನ್ನು ಪರಿಹರಿಸಲು ಶ್ರಮಿಸುತ್ತೇನೆ.
ಕರ್ನಾಟಕದಿಂದ ಕೇಂದ್ರದೊಂದಿಗೆ ಪ್ರತಿನಿಧಿಸುವ ಸಚಿವರುಗಳು ಒಂದಾಗಿ ರಾಜ್ಯದ ನೀರಾವರಿ ಸೇರಿದಂತೆ ಅಭಿವೃದ್ಧಿಗೆ ಕೆಲಸ ಮಾಡುವುದಾಗಿ ಕಾರ್ಯಕರ್ತರಿಗೆ ಭರವಸೆ ನೀಡಿದರು.
ಸಮಸ್ಯೆಗಳು ಒಂದೆರಡು ದಿನದಲ್ಲೇ ಮುಗಿಯುತ್ತವೆ ಎಂದು ಹೇಳಲಾರೆ. ಸಮಸ್ಯೆ ಬಿಡಿಸಿ ಪರಿಹಾರ ಕಂಡುಕೊಳ್ಳಲು ಹಾಗೂ ದೇಶದ ಅಭಿವೃದ್ಧಿಗೆ ಟೊಂಕ ಕಟ್ಟಿ ಕೆಲಸ ಮಾಡುತ್ತೇನೆ ಎಂದರು.
ಮೊದಲು ಮುಖ್ಯಮಂತ್ರಿಯಾಗಿದ್ದಾಗ ಅನುಭವ ಇಲ್ಲದಿದ್ದರೂ ಬೇರೆಯವರನ್ನು ಕೇಳಿ ಉತ್ತಮ ಆಡಳಿತ ನೀಡಿದೆ. ಈಗಲೂ ಅದೇ ರೀತಿ ಕಾರ್ಯನಿರ್ವಹಿಸುವೆ ಎಂದರು.
ಇದಕ್ಕೂ ಮುನ್ನ ಕೇಂದ್ರ ಸಚಿವರಾಗಿ ರಾಜ್ಯಕ್ಕೆ ಮರಳಿದ ಕುಮಾರಸ್ವಾಮಿ ಅವರಿಗೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.
ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ಕುಮಾರಸ್ವಾಮಿ ಅವರನ್ನು ಬರಮಾಡಿಕೊಳ್ಳಲು ಮುಗಿಬಿದ್ದರು.
ಈ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಯಿತು, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಕಾರ್ಯಕರ್ತರನ್ನು ಚದುರಿಸಿದರು.
ವಿಮಾನ ನಿಲ್ದಾಣದ ಸಾದಳ್ಳಿ ಟೋಲ್ ಬಳಿ ಸಾವಿರಾರು ಜೆಡಿಎಸ್ ಕಾರ್ಯಕರ್ತರು ತಮ್ಮ ನಾಯಕನನ್ನು ಸಡಗರ, ಸಂಭ್ರಮ, ಅದ್ದೂರಿಯಾಗಿ ಸ್ವಾಗತಿಸಿದರು.