ಬೆಂಗಳೂರು:ಪೋಕ್ಸೋ ಪ್ರಕರಣದಡಿ ಬಂಧನ ಭೀತಿ ಎದುರಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬಂಧಿಸದಂತೆ ರಾಜ್ಯ ಹೈಕೋರ್ಟ್ ಆದೇಶಿಸಿದೆ.
ಯಡಿಯೂರಪ್ಪ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
ಜೂನ್ 17ಕ್ಕೆ ಸಿಐಡಿ ಮುಂದೆ ಹಾಜರಾಗಬೇಕು
ಜೂನ್ 17 ರಂದು ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ನಿರ್ದೇಶನ ನೀಡಿದ್ದಲ್ಲದೆ, ಮುಂದಿನ ಶುಕ್ರವಾರಕ್ಕೆ ವಿಚಾರಣೆಯನ್ನು ಮುಂದೂಡಿದರು.
ಯಡಿಯೂರಪ್ಪ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿ, ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಅರ್ಜಿಗಳಿದ್ದು ಒಂದು ಪ್ರಕರಣವನ್ನು ರದ್ದುಗೊಳಿಸುವಂತೆ ಇನ್ನೊಂದು ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದರು.
ದೂರುದಾರೆಗೆ ಬ್ಲ್ಯಾಕ್‌ಮೇಲ್ ಮಾಡುವುದೇ ಕಸುಬು
ಪ್ರಕರಣದ ದೂರುದಾರೆಗೆ ಬ್ಲ್ಯಾಕ್‌ಮೇಲ್ ಮಾಡುವುದೇ ಕಸುಬು, ಆಕೆ ಸಾಕಷ್ಟು ಪ್ರಭಾವಿಗಳ ವಿರುದ್ಧವೂ ದೂರು ದಾಖಲಿಸಿದ್ದಾರೆ.
ಇಲ್ಲಿ ಭಾವನಾತ್ಮಕ ಅಂಶಗಳಿಗಿಂತ ವಾಸ್ತವಾಂಶಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದಾಗ, ಎಫ್‌ಐಆರ್ ಯಾರು ದಾಖಲಿಸಿದ್ದಾರೆ ಎಂದು ನ್ಯಾಯಾಧೀಶರು ಪ್ರಶ್ನಿಸಿದರು.
ಆಗ ಯಡಿಯೂರಪ್ಪ ವಕೀಲರು, ಸಂತ್ರಸ್ತೆಯ ತಾಯಿ ಎಂದರು. ಆಕೆಯ ಕೆಲಸ ಏನು ಎಂದಾಗ ಉದ್ಯಮಿ ಎಂದರು, ಆಗ ನ್ಯಾಯಾಧೀಶರು ಮಹಿಳಾ ಉದ್ಯಮಿ ಎಂದು ನ್ಯಾಯಾಲಯ ಪರಿಗಣಿಸುತ್ತದೆ ಎಂದರು.
ವಿಚಾರಣೆಗೆ ಸಹಕರಿಸಿದ್ದಾರೆ
ಸಿಐಡಿ ನೋಟಿಸ್ ಬಳಿಕ ಯಡಿಯೂರಪ್ಪ ವಿಚಾರಣೆಗೆ ಹಾಜರಾಗಿದ್ದಾರೆ, ಧ್ವನಿ ಪರೀಕ್ಷೆಗೂ ಸಹಕಾರ ನೀಡಿದ್ದಾರೆ, ಹಾಗಾಗಿ ಅವರನ್ನು ಬಂಧಿಸುವ ಅವಶ್ಯಕತೆ ಇಲ್ಲ ಎಂದರು.
ಇದಕ್ಕೆ ಪ್ರತಿ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಶಶಿಕಿರಣ ಶೆಟ್ಟಿ, ದೂರುದಾರೆ ಮೃತಪಟ್ಟಿದ್ದಾಳೆ, ಆರೋಪಿಯು ವಿಚಾರಣೆಗೆ ಹಾಜರಾಗದೆ ಜೂನ್ 11ರಂದು ದೆಹಲಿಗೆ ತೆರಳಿದ್ದಾರೆ, ಹೀಗಾಗಿ ತನಿಖಾಧಿಕಾರಿಗಳು ನ್ಯಾಯಾಲಯದಿಂದ ಅರೆಸ್ಟ್ ವಾರೆಂಟ್ ಪಡೆದಿದ್ದಾರೆ ಎಂದರು.
ಅಷ್ಟೇ ಅಲ್ಲ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದಿದೆ, ವರದಿ ಬಂದ ನಂತರವೇ ಆರೋಪಿಗೆ ನೋಟಿಸ್ ನೀಡಿರುವುದಾಗಿ ನ್ಯಾಯಾಲಯದ ಗಮನಕ್ಕೆ ತಂದರು.