ಬೆಂಗಳೂರು:ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ವಿಧಾನಸಭಾ ಸದಸ್ಯತ್ವಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ.
ಅನುಕ್ರಮವಾಗಿ ಮಂಡ್ಯ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರಗಳಿಂದ ಈ ನಾಯಕರು ಆಯ್ಕೆಗೊಂಡಿರುವ ಹಿನ್ನೆಲೆಯಲ್ಲಿ ವಿಧಾನಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕುಮಾರಸ್ವಾಮಿ ಅವರು ಚನ್ನಪಟ್ಟಣ, ಬೊಮ್ಮಾಯಿ ಅವರು ಶಿಗ್ಗಾಂವ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.
ಲೋಕಸಭೆಗೆ ಆಯ್ಕೆ
ಉಭಯ ನಾಯಕರು ಲೋಕಸಭೆಗೆ ಆಯ್ಕೆಗೊಂಡಿರುವುದರಿಂದ ಯಾವುದಾದರೂ ಒಂದು ಸ್ಥಾನವನ್ನು ತೆರವುಗೊಳಿಸಬೇಕು.
ಲೋಕಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸುವುದಕ್ಕೂ ಮುನ್ನ ತಾವು ಹಿಂದೆ ಪ್ರತಿನಿಧಿಸುತ್ತಿದ್ದ ಕ್ಷೇತ್ರ ತೆರವುಗೊಳಿಸಬೇಕಿದೆ.
ಕರ್ನಾಟಕದಿಂದ ಮೂವರು ವಿಧಾನಸಭಾ ಸದಸ್ಯರು ಹಾಗೂ ವಿಧಾನ ಪರಿಷತ್ತಿನ ಒಬ್ಬ ಸದಸ್ಯರು ಪ್ರಸಕ್ತ ಲೋಕಸಭೆಗೆ ಆಯ್ಕೆಯಾಗಿದ್ದಾರೆ.
ಇ.ತುಕಾರಾಂ ರಾಜೀನಾಮೆ
ಸಂಡೂರು ವಿಧಾನಸಭೆಯನ್ನು ಪ್ರತಿನಿಧಿಸುತ್ತಿದ್ದ ಇ.ತುಕಾರಾಂ, ಬಳ್ಳಾರಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಗೊಂಡಿದ್ದು, ಅವರು ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷದ ನಾಯಕರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸಂಸತ್‌ಗೆ ಆಯ್ಕೆಗೊಂಡಿದ್ದು ಅವರು, ತಮ್ಮ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕಿದೆ.