ಮೈಸೂರು: ಇಡಿ, ಸಿಬಿಐ ಬಳಕೆ ಮಾಡುವ ಮೂಲಕ ಬಿಜೆಪಿ ಮೊದಲಿನಿಂದಲೂ ದ್ವೇಷದ ರಾಜಕಾರಣ ಮಾಡಿಕೊಂಡು ಬರುತ್ತಿದ್ದು, ಅದಕ್ಕಾಗಿ ಜನ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಹುಮತ ಕೊಡಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರ ಕುಟುಂಬ ನಂತರ ಯಡಿಯೂರಪ್ಪ ಕುಟುಂಬ ಗುರಿಮಾಡಲಾಗುತ್ತಿದೆ ಎಂಬ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಡಿ.ಕೆ. ಶಿವಕುಮಾರ್, ರಾಹುಲ್ ಗಾಂಧಿ ಹಾಗೂ ತಮ್ಮ ಮೇಲೆ ಬಿಜೆಪಿ ಕೇಸ್ ಹಾಕಿರುವುದನ್ನು ಏನೆಂದು ಕರೆಯಬೇಕು, ರಾಹುಲ್ ಗಾಂಧಿ ಅವರ ಸಂಸದ ಸ್ಥಾನವನ್ನೇ ರದ್ದುಗೊಳಿಸಿದ್ದನ್ನು ಏನೆಂದು ಕರೆಯುವುದು ಎಂದು ಪ್ರಶ್ನಿಸಿದರು.
ಸೇಡಿನ ರಾಜಕಾರಣ ಮಾಡುವುದಿಲ್ಲ
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜೈಲಿಗೆ ಕಲಿಸಿದ್ದನ್ನು ಏನೆಂದು ಕರೆಯಬೇಕು, ದ್ವೇಷದ ರಾಜಕಾರಣವೋ, ಪ್ರೀತಿಯ ರಾಜಕಾರಣವೋ, ಸೇಡಿನ ರಾಜಕಾರಣ ಮಾಡುವುದು ಅವರು, ನಾವು ಯಾವತ್ತೂ ಸೇಡಿನ ರಾಜಕಾರಣ ಮಾಡುವುದಿಲ್ಲ, ಇಂದಿನವರೆಗೆ ಯಾರ ಮೇಲೂ ದ್ವೇಷದ ರಾಜಕಾರಣವನ್ನು ನಾನು ಮಾಡಿಲ್ಲ, ನಿನ್ನೆ ಮೊನ್ನೆ ರಾಜಕೀಯಕ್ಕೆ ಬಂದವನಲ್ಲ.
ದಕ್ಷಿಣ ಭಾರತದಿಂದ ಕೇಂದ್ರ ಸಂಪುಟದಲ್ಲಿ ಏಳು ಸಚಿವರಾಗಿದ್ದರೂ ಈ ಭಾಗದ ಜನ ಬಿಜೆಪಿ ಬೆಂಬಲಿಸುವುದಿಲ್ಲ, ಅದು ಆರ್ಎಸ್ಎಸ್ನ ರಾಜಕೀಯ ಮುಖವಾಡ, ಉತ್ತರ ಭಾರತದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ, ಅಹಂಕಾರಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ನೀಟ್ ಮರುಪರೀಕ್ಷೆ ನಡೆಸಬೇಕು
ನೀಟ್ ಪರೀಕ್ಷೆ ಕುರಿತು ಅವರು, ರ್ಯಾಂಕ್ ನೀಡುವುದರಲ್ಲಿ ಆಗಿರುವ ಹಗರಣದ ತನಿಖೆಯಾಗಬೇಕು ಹಾಗೂ ಮರುಪರೀಕ್ಷೆ ನಡೆಸಬೇಕು, ಕೃಪಾಂಕ ಕೊಟ್ಟು ಉತ್ತೀರ್ಣ ಮಾಡುವುದು ಕೆಟ್ಟ ಅಭ್ಯಾಸ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ನ್ಯಾಯಯುತವಾಗಿ ಪರೀಕ್ಷೆ ನಡೆಸದೆ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದರು.
ಎಸ್.ಸಿ., ಎಸ್.ಟಿ ಮೆರಿಟ್ ವಿದ್ಯಾರ್ಥಿವೇತನ ಶೇ.60ರಿಂದ ಶೇ.75ಕ್ಕೆ ಏರಿಸಿದ್ದು, 6 ಲಕ್ಷ ಸೀಲಿಂಗ್ ಲಿಮಿಟ್ ನಿಗದಿಪಡಿಸಿರುವುದು ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂಬ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು.
ಶುಲ್ಕ ಹೆಚ್ಚಳ ವಿಚಾರ ಚರ್ಚೆ
ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜು ಶುಲ್ಕ ಶೇ.10ರಷ್ಟು ಹೆಚ್ಚಿಸಿರುವ ಬಗ್ಗೆ ವಿಚಾರ ಮಾಡುವುದಾಗಿ ತಿಳಿಸಿದರು.
ರೈತರಿಗೆ ಬರಪರಿಹಾರದ ಬಾಕಿ ಮೊತ್ತವನ್ನು ವಿತರಿಸಲಾಗುತ್ತಿದೆ, ಜಿಲ್ಲಾ ಹಾಗೂ ತಾಲೂಕು ಪಂಚಾಯತ್ಗಳಿಗೆ ಆದಷ್ಟೂ ಶೀಘ್ರ ಚುನಾವಣೆ ಮಾಡುತ್ತೇವೆ ಎಂದರು.