ಸಚಿವರ ಸಾಧನೆ ವರದಿ ಸಲ್ಲಿಸಲು ಸಿಎಂಗೆ ಹೈಕಮಾಂಡ್ ಸೂಚನೆ
ಬೆಂಗಳೂರು: ಸರ್ಕಾರ, ಪಕ್ಷಕ್ಕೆ ಹೊರೆಯಾಗಿರುವ ಸಚಿವರನ್ನು ಅಧಿಕಾರದಿಂದ ಕೆಳಗಿಳಿಸಿ ಎಂದು ಕಾಂಗ್ರೆಸ್ ವರಿಷ್ಠರು ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ.
ಪಂಚ ಗ್ಯಾರಂಟಿಗಳನ್ನು ನೀಡಿದ ನಂತರವೂ ಕರ್ನಾಟಕದಲ್ಲಿ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಎರಡಂಕಿ ದಾಟದಿರುವುದು ಭಾರೀ ಮುಜುಗರ ತಂದಿದೆ.
ಕಳೆದ ಒಂದು ವರ್ಷದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯನ್ನು ಹೊರತುಪಡಿಸಿ ಉಳಿದ ಸಚಿವರುಗಳು ತಮ್ಮ ಇಲಾಖೆಗಳಲ್ಲಿ ಮಾಡಿರುವ ಸಾಧನೆಯ ವರದಿಯನ್ನು ಸಲ್ಲಿಸುವಂತೆ ಸಿದ್ದರಾಮಯ್ಯ ಅವರಿಗೆ ಎಐಸಿಸಿ ಸೂಚಿಸಿದೆ.
ಸಚಿವರುಗಳು ತಮಗೆ ವಹಿಸಿದ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಜೊತೆಗೆ ಪಕ್ಷ ಸಂಘಟನೆಗೆ ಒತ್ತು ನೀಡಿದ್ದರೆ, ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗಳಿಸಬಹುದಿತ್ತು ಎಂಬುದು ವರಿಷ್ಠರ ಅಭಿಪ್ರಾಯ.
ಐದು ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಿದ ನಂತರವೂ ಕೇವಲ 9 ಕ್ಷೇತ್ರಗಳಲ್ಲಿ ಮಾತ್ರ ಪಕ್ಷ ಗೆಲುವು ಸಾಧಿಸಿದೆ.
ರಾಜ್ಯದಲ್ಲಿ 15 ರಿಂದ 18 ಸ್ಥಾನ ನಿರೀಕ್ಷಿಸಿದ್ದ ವರಿಷ್ಠರಿಗೆ ಅದರಲ್ಲಿ ಅರ್ಧದಷ್ಟು ಮಾತ್ರ ಸ್ಥಾನ ಬಂದಿರುವುದೇ ಕೋಪಕ್ಕೆ ಕಾರಣ.
ಸಚಿವರು ಪ್ರತಿನಿಧಿಸುವ 14 ವಿಧಾನಸಭಾ ಕ್ಷೇತ್ರಗಳಲ್ಲೇ ಪಕ್ಷಕ್ಕೆ ಹಿನ್ನಡೆಯಾಗಿದೆ. ಸಚಿವರುಗಳೇ ಪಕ್ಷದ ಅಭ್ಯರ್ಥಿಗಳಿಗೆ ಮುನ್ನಡೆ ದೊರಕಿಸಿಕೊಡದಿದ್ದರೆ ಬೇರೆ ಕ್ಷೇತ್ರಗಳ ಸ್ಥಿತಿ ಏನು? ಅದರಲ್ಲೂ ಎರಡು-ಮೂರು ಮಂತ್ರಿಗಳ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್‌ಗೆ 50 ಸಾವಿರ ಮತಗಳು ಹೆಚ್ಚು ಹೋಗಿವೆ.
ಟಿಕೆಟ್ ಹಂಚಿಕೆ ಸಂದರ್ಭದಲ್ಲೂ ಸಚಿವರ ಶಿಫಾರಸಿಗೆ ಮನ್ನಣೆ ನೀಡಿರುವುದಲ್ಲದೆ, ಕೆಲವು ಕ್ಷೇತ್ರಗಳಲ್ಲಿ ನಮಗೆ ನಿರ್ದಿಷ್ಟ ಅಭ್ಯರ್ಥಿಯೇ ಬೇಕೆಂದಾಗ ಅಂಥವರಿಗೇ ಟಿಕೆಟ್ ನೀಡಿದರೂ ನಮ್ಮ ಪರ ಫಲಿತಾಂಶ ಬರಲಿಲ್ಲ.
ಜನಸ್ನೇಹಿ ಆಡಳಿತ ನೀಡಿ, ಸರ್ಕಾರದ ಯೋಜನೆಗಳು ಜನರಿಗೆ ತಲುಪುವಂತಾಗಬೇಕು. ಯಾವುದೇ ಕಡತಗಳೂ ನಿಗದಿತ ಸಮಯದಲ್ಲಿ ವಿಲೇವಾರಿ ಆಗುವಂತೆ ನೋಡಿಕೊಳ್ಳಿ. ಸಚಿವರ ಕಾರ್ಯವೈಖರಿ ಬಗ್ಗೆ ಗಮನಹರಿಸಿ ಎಂದು ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಿವಿಮಾತು ಹೇಳಿದ್ದರು.
ಲೋಕಸಭಾ ಚುನಾವಣೆ ನಂತರ ಸೇರಿದ್ದ ಮೊದಲ ಸಂಪುಟ ಸಭೆಯಲ್ಲೇ ಮುಖ್ಯಮಂತ್ರಿ ಸಚಿವರಿಗೆ ಕ್ಲಾಸ್ ತೆಗೆದುಕೊಂಡು ನೀತಿ ಪಾಠ ಹೇಳಿದ್ದರು.
ಆಡಳಿತದಲ್ಲಿ ಸುಧಾರಣೆ ಆಗಬೇಕು. ಕಡತಗಳ ವಿಳಂಬವನ್ನು ತಪ್ಪಿಸಿ, ಜನಸ್ನೇಹಿ ಆಡಳಿತ ನೀಡಿ ಎಂದು ಮುಖ್ಯಮಂತ್ರಿ ಅವರು ಅಂದಿನ ಸಭೆಯಲ್ಲಿ ತಿಳಿಸಿದ್ದಲ್ಲದೆ, ಮುಖ್ಯಕಾರ್ಯದರ್ಶಿ ಅವರಿಗೂ ಸೂಚನೆಗಳನ್ನು ನೀಡಿದ್ದರು.
ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ಸೋಲಿನ ಪರಾಮರ್ಶೆ ನಡೆಯುತ್ತಿದ್ದು, ಜಿಲ್ಲಾ ಸಚಿವರುಗಳಿಂದಲೇ ವರದಿ ಪಡೆಯಲಾಗುತ್ತಿದೆ.
ಸಚಿವರುಗಳು ಕಳೆದ ಒಂದು ವರ್ಷಗಳಲ್ಲಿ ತಮ್ಮ ಇಲಾಖೆಗಳಲ್ಲಿ ಮಾಡಿರುವ ಸಾಧನೆ ಬಗ್ಗೆ ಪಕ್ಷ ಮತ್ತು ಸರ್ಕಾರ ಪ್ರತ್ಯೇಕವಾಗಿ ವರದಿ ಸಿದ್ಧಪಡಿಸಿ, ಪಕ್ಷದ ವರಿಷ್ಠರಿಗೆ ತಲುಪಿಸಲಿದ್ದಾರೆ.
ವರದಿ ತಲುಪಿದ ನಂತರವೇ ಕೆಲವು ಸಚಿವರ ತಲೆದಂಡ ಆಗುವುದು ನಿಶ್ಚಿತ. ಕನಿಷ್ಠ ನಾಲ್ಕರಿಂದ ಆರು ಮಂದಿ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.