ಬೆಂಗಳೂರು: ಎಲ್ಲರಲ್ಲೂ ಮನುಷ್ಯತ್ವ ಬೆಳೆಯಲಿ, ಸಹಿಷ್ಣುತೆ, ಪ್ರೀತಿ ವಿಶ್ವಾಸ ಬೆಳೆಯಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಕರೆ ನೀಡಿದ್ದಾರೆ.
ಬಕ್ರೀದ್ ಆಚರಣೆ ಅಂಗವಾಗಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮುಸಲ್ಮಾನ ಬಾಂಧವರಿಗೆ ಶುಭಾಶಯ ಕೋರಿ ಮಾತನಾಡಿದ ಅವರು, ಸಮಾಜದಲ್ಲಿ ನಾವೆಲ್ಲರೂ ಅಣ್ಣ ತಮ್ಮಂದಿರಂತೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳಬೇಕು, ಇನ್ನೊಂದು ಧರ್ಮವನ್ನು ಪ್ರೀತಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಎಲ್ಲಾ ಧರ್ಮ, ಜಾತಿ, ಭಾಷೆ, ಪ್ರಾಂತ್ರ್ಯದವರು ಒಟ್ಟಾಗಿ ಬಾಳಬೇಕು, ಮನುಷ್ಯತ್ವ ಬಹಳ ದೊಡ್ಡದು, ಎಲ್ಲರೂ ಪರಸ್ಪರ ಪ್ರೀತಿಸಬೇಕು, ಪ್ರತಿಯೊಬ್ಬರೂ ಸಹಿಷ್ಣುತೆಯನ್ನು ಪಾಲಿಸಬೇಕು, ಆಗ ಮಾತ್ರ ರಾಷ್ಟ್ರ, ಸಮಾಜ ಹಾಗೂ ಎಲ್ಲಾ ಧರ್ಮಗಳೂ ಏಳಿಗೆಯಾಗುತ್ತದೆ.
ಯಾವುದೇ ತಾರತಮ್ಯ ಮಾಡುವುದಿಲ್ಲ
ಸರ್ವ ಧರ್ಮ ಸಮನ್ವಯ, ಸಂವಿಧಾನದಲ್ಲಿ ನಂಬಿಕೆ ಇಟ್ಟಿರುವ ಸರ್ಕಾರ ನಮ್ಮದು, ಸಂವಿಧಾನ ಹೇಳುವಂತೆ ನಡೆದುಕೊಳ್ಳುತ್ತೇವೆ, ಯಾವುದೇ ತಾರತಮ್ಯ ಮಾಡುವುದಿಲ್ಲ, ಕರ್ನಾಟಕದ ಏಳು ಕೋಟಿ ಜನರ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮದು, ಈ ಕೆಲಸವನ್ನು ತಾರತಮ್ಯವಿಲ್ಲದೆ ಮಾಡುತ್ತೇವೆ ಎಂದರು.
ಅಲ್ಪಸಂಖ್ಯಾತರು ಯಾವುದೇ ಕಾರಣಕ್ಕೂ ಭಯ, ಆತಂಕ ಪಡಬೇಕಾದ ಅಗತ್ಯವಿಲ್ಲ, ನಮ್ಮ ಸರ್ಕಾರದಲ್ಲಿ ಅಲ್ಪಸಂಖ್ಯಾತರು ಹಾಗೂ ಬಹುಸಂಖ್ಯಾತರನ್ನು ಒಂದೇ ರೀತಿಯಲ್ಲಿ ರಕ್ಷಣೆ ಮಾಡುವ ಕೆಲಸ ಮಾಡುತ್ತೇವೆ, ನಾಡಿನ ಅಭಿವೃದ್ಧಿಗೆ ಒಳ್ಳೆ ಮಳೆ ಬೆಳೆಯಾಗಲಿ ಎಂದು ಹಾರೈಸಿದರು.