ಪೊಲೀಸರ ಸಮಯ ಪ್ರಜ್ಞೆಯಿಂದ ಪ್ರಕರಣ ಬಯಲು : ಬಿ.ದಯಾನಂದ್
ಬೆಂಗಳೂರು : ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದು ಅವರ ಕುಟುಂಬಕ್ಕೆ ನ್ಯಾಯ ಕೊಡಿಸುವುದಾಗಿ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಬಿ.ದಯಾನಂದ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರ ನಟ ದರ್ಶನ್ ಮತ್ತು ಸಹಚರರಿಂದ ನಡೆದಿದೆ ಎಂದು ಹೇಳಲಾಗುತ್ತಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸೆಲೆಬ್ರಟಿಗಳು ಸೇರಿದಂತೆ ಈವರೆಗೆ 17 ಮಂದಿಯನ್ನು ಬಂಧಿಸಲಾಗಿದೆ ಎಂದರು.
ಈ ಪ್ರಕರಣ ಅತ್ಯಂತ ಹೇಯ ಕೃತ್ಯ ಎಂದು ಬಣ್ಣಿಸಿದ ಕಮಿಷನರ್ ಅವರು, ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷಾ ವರದಿ ಪೊಲೀಸರ ಕೈಸೇರಿದ್ದು, ಅದನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ.
ನಮ್ಮ ಪೊಲೀಸರ ಸಮಯ ಪ್ರಜ್ಞೆಯಿಂದ ಪ್ರಕರಣ ಬಯಲಾಗಿ ಹತ್ಯೆಗೈದ ಆರೋಪಿಗಳನ್ನು ಬಂಧಿಸಿ, ತನಿಖೆಯನ್ನು ಒಂದು ಹಂತಕ್ಕೆ ಮುಟ್ಟಿಸಲಾಗಿದೆ.
ಸ್ವಲ್ಪ ನಿರ್ಲಕ್ಷ್ಯ ವಹಿಸಿದ್ದರೂ ಪ್ರಕರಣ ಬೇರೆ ದಾರಿ ಹಿಡಿಯುತ್ತಿತ್ತು
ತನಿಖೆ ವಿವರಗಳನ್ನು ನಾವು ಈಗಲೇ ಹೇಳಲು ಆಗುವುದಿಲ್ಲ, ಸ್ವಲ್ಪ ನಿರ್ಲಕ್ಷ್ಯ ವಹಿಸಿದ್ದರೂ ಪ್ರಕರಣ ಬೇರೆ ದಾರಿ ಹಿಡಿಯುತ್ತಿತ್ತು.
ಪ್ರಕರಣವನ್ನು ಎಲ್ಲಾ ಆಯಾಮಗಳಿಂದ ಕೂಲಂಕಷವಾಗಿ ತನಿಖೆ ಮಾಡಲಾಗುತ್ತಿದ್ದು ಸರಿಯಾದ ದಿಕ್ಕಿನಲ್ಲಿ ಸಾಗಿದೆ.
ಪ್ರಕರಣದಲ್ಲಿ ಸೆಲೆಬ್ರೆಟಿಗಳು ಇರುವುದರಿಂದ ಬಹಳ ಜಾಗರೂಕತೆಯಿಂದ ಹಲವು ಸಾಕ್ಷ್ಯಾಧಾರಗಳನ್ನು ಕಲೆಹಾಕಲಾಗುತ್ತಿದೆ.
ಇದು ಗಂಭೀರ ಪ್ರಕರಣವಾಗಿರುವುದರಿಂದ ಎಲ್ಲಾ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುತ್ತೇವೆ.
ಎಸಿಪಿಗೆ ತನಿಖೆಯ ಹೊಣೆ
ಪ್ರಕರಣ ಗಂಭೀರವಾಗಿರುವುದರಿಂದ ಎಸಿಪಿಗೆ ತನಿಖೆಯ ಹೊಣೆ ನೀಡಿ ಅಗತ್ಯ ಸಿಬ್ಬಂದಿ ಒದಗಿಸಲಾಗಿದೆ.
ಬೆಂಗಳೂರು, ಮೈಸೂರು, ಚಿತ್ರದುರ್ಗ ಸೇರಿದಂತೆ ಹಲವು ಕಡೆಗೆ ತೆರಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಾವು ಎಲ್ಲಾ ಹಂತಗಳಲ್ಲೂ ಸಮರ್ಪಕ ಹಾಗೂ ವಿಧಿ ವಿಜ್ಞಾನ, ತಾಂತ್ರಿಕ, ಕಾನೂನು ಸಲಹೆ ಪಡೆದುಕೊಂಡು ತನಿಖೆ ಕೈಗೊಂಡಿದ್ದೇವೆ ಎಂದರು.
ಸಾರ್ವಜನಿಕರು ಊಹಾ-ಪೋಹಾಗಳಿಗೆ ಕಿವಿಗೊಡದೆ, ತಾಳ್ಮೆ, ಸಹನೆಯಿಂದ ಸಹಕರಿಸಿದರೆ ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲು ಸಹಕಾರಿಯಾಗುತ್ತದೆ, ಎಲ್ಲರೂ ಸೇರಿ ಜವಾಬ್ದಾರಿಯಿಂದ ಪ್ರಕರಣವನ್ನುಬಗೆಹರಿಸಬೇಕಿದೆ ಎಂದರು.