ಲೋಕಸಭಾ ಚುನಾವಣೆ ಸೋಲಿನ ಸೇಡಿಗೆ ರಂಗ ಪ್ರವೇಶ
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣಾ ಸೋಲಿನ ಸೇಡು ತೀರಿಸಿಕೊಳ್ಳಲು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಕರ್ಮಭೂಮಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ರಂಗ ಪ್ರವೇಶ ಮಾಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸಹೋದರ ಡಿ.ಕೆ.ಸುರೇಶ್ ಭಾರೀ ಅಂತರದಿಂದ ಸೋಲುಂಡ ನಂತರ ತಮ್ಮ ರಾಜಕೀಯ ಸೇಡು ತೀರಿಸಿಕೊಳ್ಳಲು ಜೊತೆಗೆ ಚನ್ನಪಟ್ಟಣದಲ್ಲಿ ತಮ್ಮ ಸಹೋದರನನ್ನು ಕಣಕ್ಕಿಳಿಸುವ ಉದ್ದೇಶದಿಂದ ಮತದಾರರ ನಾಡಿ ಮಿಡಿತ ಅರಿಯಲು ಈ ಪ್ರವಾಸ ಕೈಗೊಂಡಿದ್ದಾರೆ ಎನ್ನಲಾಗಿದೆ.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕುಮಾರಸ್ವಾಮಿ ಆಯ್ಕೆಗೊಂಡ ನಂತರ ಅವರಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವನ್ನು ತಮ್ಮ ಹಿಡಿತಕ್ಕೆ ಪಡೆಯಲು ಶಿವಕುಮಾರ್ ನಾಳೆ ಇಡೀ ದಿನ ಬೊಂಬೆ ನಾಡಿನಲ್ಲಿ ಪ್ರವಾಸ ಹಮ್ಮಿಕೊಂಡಿದ್ದಾರೆ.
ಕುಮಾರಸ್ವಾಮಿ ಇರುವವರೆಗೂ ಕ್ಷೇತ್ರದಲ್ಲಿ ಅಪರೂಪಕ್ಕೆ ಒಮ್ಮೆ ಕಾರ್ಯಕ್ರಮಗಳಿಗೆ ಭೇಟಿ ನೀಡುವುದನ್ನು ಬಿಟ್ಟರೆ, ಎಂದೂ ಇಡೀ ದಿನ ತಮ್ಮ ಪಕ್ಕದ ಕ್ಷೇತ್ರದಲ್ಲಿ ಶಿವಕುಮಾರ್ ಪ್ರವಾಸ ಕೈಗೊಂಡಿರಲಿಲ್ಲ.
ಬೊಂಬೆ ನಾಡಿನಲ್ಲಿ ಹೊಸ ರಾಜಕೀಯ ತಂತ್ರ
ನಾಳೆ ಬೆಳಗ್ಗೆಯಿಂದ ರಾತ್ರಿ 8 ಗಂಟೆವರೆಗೂ ಚನ್ನಪಟ್ಟಣ ಕ್ಷೇತ್ರದ ವ್ಯಾಪ್ತಿಯಲ್ಲಿನ ಎಲ್ಲಾ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುವ ಮೂಲಕ ಹೊಸ ರಾಜಕೀಯ ತಂತ್ರ ರೂಪಿಸುತ್ತಿದ್ದಾರೆ.
ಪ್ರವಾಸ ಸಂದರ್ಭದಲ್ಲಿ ಒಂದು ಗಂಟೆ ಸಮಯ ಸ್ಥಳೀಯ ಅಧಿಕಾರಿಗಳ ಜೊತೆ ಪರಿಶೀಲನಾ ಸಭೆ ಹೊರತುಪಡಿಸಿ ಉಳಿದೆಲ್ಲಾ ಸಮಯ ಕ್ಷೇತ್ರದ 14 ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ.
ಈ ದೇವಸ್ಥಾನಗಳಿಗೆ ಭೇಟಿ ನೀಡುವುದರಿಂದ ಚನ್ನಪಟ್ಟಣ ಕ್ಷೇತ್ರದ ಬಹುತೇಕ ಗ್ರಾಮಗಳನ್ನು ಸಂಪರ್ಕಿಸಿದಂತಾಗುತ್ತದೆ.
ಎಂಟಕ್ಕಿಂತ ಹೆಚ್ಚು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಇಲ್ಲವೇ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕ್ಷೇತ್ರವನ್ನು ವಿಧಾನಸಭೆಯಲ್ಲಿ ಪ್ರತಿನಿಧಿಸಿದ್ದಾರೆ.
ಜೆಡಿಎಸ್ ಬಿಟ್ಟರೆ ಯೋಗೇಶ್ವರ್ ತಮ್ಮ ವೈಯಕ್ತಿಕ ವರ್ಚಸ್ಸಿನಿಂದ ಗೆಲುವು ಸಾಧಿಸಿದ್ದಾರೆ, ಯೋಗೇಶ್ವರ್ ಕೂಡಾ ಕಾಂಗ್ರೆಸ್ ಚಿನ್ಹೆಯಿಂದ ವಿಧಾನಸಭೆ ಪ್ರವೇಶಿಸಿದ್ದರು.
ಇದನ್ನು ಹೊರತುಪಡಿಸಿದರೆ, ಕಾಂಗ್ರೆಸ್ ಇತ್ತೀಚಿನ ಎಲ್ಲಾ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿರುವ ಜೊತೆಗೆ ಠೇವಣಿಯನ್ನೂ ಕಳೆದುಕೊಂಡಿದೆ.
ತಮ್ಮ ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಸೋಲಿನ ಸೇಡನ್ನು ಈ ಕ್ಷೇತ್ರದಲ್ಲೇ ತೀರಿಸಿಕೊಳ್ಳಬೇಕೆಂಬ ಹಠ ಕಾಂಗ್ರೆಸ್ ಅಧ್ಯಕ್ಷರಿಗೆ ಇದ್ದಂತಿದೆ.
ಇದಕ್ಕಾಗಿ ಪಕ್ಷದ ಸಂಘಟನೆ ಮಾಡುವ ದಿಕ್ಕಿನಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡುವ ಮೂಲಕ ಮತದಾರರ ವಿಶ್ವಾಸ ಪಡೆಯಲು ಮುಂದಾಗಿದ್ದಾರೆ.
ಕಳೆದ ಶನಿವಾರವಷ್ಟೇ ಕುಮಾರಸ್ವಾಮಿ ತಮ್ಮ ವಿಧಾನಸಭಾ ಸದಸ್ಯತ್ವಕ್ಕೆ ನೀಡಿದ ರಾಜೀನಾಮೆ ಅಂಗೀಕಾರವಾಗುತ್ತಿದ್ದಂತೆ ಶಿವಕುಮಾರ್ ತಮ್ಮ ಜಿಲ್ಲೆಯ ಈ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಹೊರಟಿದ್ದಾರೆ.
ಈಗಾಗಲೇ ಜಿಲ್ಲೆಯ ಕನಕಪುರ, ರಾಮನಗರ, ಮಾಗಡಿ ಕಾಂಗ್ರೆಸ್ ವಶದಲ್ಲಿದ್ದರೆ, ಚನ್ನಪಟ್ಟಣ ಜೆಡಿಎಸ್ ತೆಕ್ಕೆಯಲ್ಲಿತ್ತು.