ಜೆಡಿಎಸ್ ಗೆ ಚನ್ನಪಟ್ಟಣ, ಬಿಜೆಪಿಗೆ ಶಿಗ್ಗಾವಿ, ಸಂಡೂರು
ಬೆಂಗಳೂರು : ಕರ್ನಾಟಕದಲ್ಲಿ ಜರುಗಲಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರೆಯಲಿದೆ.
ಉಪ ಚುನಾವಣೆ ಹಾಗೂ ಇತರ ರಾಜಕೀಯ ವಿಚಾರಗಳಿಗೆ ಸಂಬಂಧಿಸಿದಂತೆ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ದೆಹಲಿಯಲ್ಲಿಂದು ಚರ್ಚಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಹಾಗೂ ಇ.ತುಕಾರಾಂ ಲೋಕಸಭೆಗೆ ಆಯ್ಕೆಗೊಂಡಿರುವುದರಿಂದ ಅವರುಗಳು ಪ್ರತಿನಿಧಿಸುತ್ತಿದ್ದ ಕ್ರಮವಾಗಿ ಚನ್ನಪಟ್ಟಣ, ಶಿಗ್ಗಾಂವ್ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.
ಚನ್ನಪಟ್ಟಣವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು ಶಿಗ್ಗಾಂವ್ ಹಾಗೂ ಸಂಡೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಳಿಸಲು ಸಭೆಯಲ್ಲಿ ಸಮ್ಮತಿಸಲಾಗಿದೆ.
ಲೋಕಸಭಾ ಚುಣಾವಣೆಯಲ್ಲಿ ಉಭಯ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಒಗ್ಗಟ್ಟಿನಿಂದ ಹೋರಾಟ ನಡೆಸಿ ಮೂರೂ ಕ್ಷೇತ್ರಗಳನ್ನು ತೆಕ್ಕೆಗೆ ತೆಗೆದುಕೊಳ್ಳಬೇಕು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ತಲಾಒಂದು ಕ್ಷೇತ್ರದಲ್ಲಿ ಜಯ ಗಳಿಸಿದ್ದವು. ಆದರೆ, ಮೈತ್ರಿ ನಂತರ ನಡೆಯುತ್ತಿರುವ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಬಲ ಹೆಚ್ಚಿಸಿಕೊಳ್ಳಲು ಉಭಯ ನಾಯಕರು ನಿರ್ಧರಿಸಿದ್ದಾರೆ.
ಉಪ ಚುನಾವಣೆ ನಡೆಯಲಿರುವ ಮೂರೂ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಈಗಲೇ ಹೆಸರಿಸುವುದು ಬೇಡ, ಪಕ್ಷವು ಕ್ಷೇತ್ರ ಸಮೀಕ್ಷೆ ನಡೆಸಿದ ನಂತರ ಅದರ ವರದಿಯ ಆಧಾರದ ಮೇಲೆ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸೋಣ ಎಂದು ಷಾ ಅವರು ಕುಮಾರಸ್ವಾಮಿ ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುಟುಂಬ ಸ್ಪರ್ಧಿಸುವ ಮಾತುಗಳು ಕೇಳಿಬರುತ್ತಿರುವ ಜೊತೆಗೆ ಅವರು ಇಂದಿನಿಂದಲೇ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿರುವುದೂ ಈ ತುರ್ತು ಚರ್ಚೆಗೆ ಕಾರಣ ಎನ್ನಲಾಗಿದೆ.
ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ. ಕುಟುಂಬವನ್ನು ಮಣಿಸಿದಂತೆ ಇಲ್ಲಿಯೂ ಅವರು ಕಣಕ್ಕಿಳಿದರೆ ಅದೇ ಫಲಿತಾಂಶ ಮರುಕಳಿಸುವಂತಾಗಬೇಕು ಎಂದು ಷಾ ತಿಳಿಸಿದ್ದಾರೆ. ಇದಲ್ಲದೆ, ಪಕ್ಷ ಸಂಘಟನೆ ಸೇರಿದಂತೆ ಕೆಲವು ರಾಜಕೀಯ ವಿಚಾರಗಳ ಬಗ್ಗೆಯೂ ಉಭಯ ನಾಯಕರು ಚರ್ಚಿಸಿದ್ದಾರೆ ಎನ್ನಲಾಗಿದೆ.