ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ – ಕೇಂದ್ರವು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಚರ್ಚೆ
ಬೆಂಗಳೂರು : ಮೈಸೂರು – ಬೆಂಗಳೂರು- ಚನ್ನೈ ಬುಲೆಟ್ ಟ್ರೈನ್ ಸೇರಿದಂತೆ ಕರ್ನಾಟಕದ ರೈಲ್ವೆ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವುದಲ್ಲದೆ, ಅಗತ್ಯ ಆರ್ಥಿಕ ನೆರವು ದೊರಕಿಸುವುದಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಭರವಸೆ ನೀಡಿದ್ದಾರೆ.
ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಇಂದು ದೆಹಲಿಯಲ್ಲಿ ವೈಷ್ಣವ್ ಅವರನ್ನು ಭೇಟಿ ಮಾಡಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ ಸಂದರ್ಭದಲ್ಲಿ ಈ ಆಶ್ವಾಸನೆ ನೀಡಿದ್ದಾರೆ.
ಹೆಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಮಂಜೂರಾಗಿದ್ದ ಬೆಂಗಳೂರು – ಸತ್ಯಮಂಗಲ – ಚಾಮರಾಜನಗರ (ಕನಕಪುರ-ಮಳವಳ್ಳಿ ಮಾರ್ಗ) ರೈಲ್ವೆ ಯೋಜನೆಯನ್ನು ಕೈಗೆತ್ತಿಕೊಂಡು ಆದಷ್ಟು ಶೀಘ್ರ ಪೂರ್ಣಗೊಳಿಸುವುದಾಗಿಯೂ ರೈಲ್ವೆ ಸಚಿವರು ಭರವಸೆ ನೀಡಿದ್ದಾರೆ.
ಹೊರ ರಾಜ್ಯದಿಂದ ಬರುವ ರೈಲುಗಳನ್ನು ಬೆಂಗಳೂರು ಮಾರ್ಗವಾಗಿ ಮಂಡ್ಯ-ಮೈಸೂರಿಗೆ ವಿಸ್ತರಿಸುವ ಪ್ರಸ್ತಾವವೂ ಚರ್ಚೆಯಲ್ಲಿ ಬಂದಿದೆ. ಕೆಲವು ಯೋಜನೆಗಳು ಕುಂಟುತ್ತಾ ಸಾಗಿರುವುದರಿಂದ ವರ್ಷದಿಂದ ವರ್ಷಕ್ಕೆ ಯೋಜನಾ ವೆಚ್ಚ ಹೆಚ್ಚುತ್ತಿದೆ.
ಅಲ್ಲದೆ, ಕರ್ನಾಟಕ ಸರ್ಕಾರದ ಜೊತೆಗಿನ ತಲಾ ಶೇಕಡಾ 50ರಷ್ಟು ಪಾಲುದಾರಿಕೆ ಯೋಜನೆಗಳಿಗೂ ಚಾಲನೆ ದೊರಕಿಸುವಂತೆ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಬುಲೆಟ್ ಟ್ರೈನ್ ವಿಚಾರದಲ್ಲಿ ಈಗಾಗಲೇ ತಮಿಳುನಾಡು, ಆಂಧ್ರ ಪ್ರದೇಶ ಭಾಗದಲ್ಲಿ ಪ್ರತ್ಯೇಕ ಮಾರ್ಗಕ್ಕಾಗಿ ಸಮೀಕ್ಷೆ ಮತ್ತು ಭೂಸ್ವಾಧೀನ ಕಾರ್ಯ ನಡೆದಿದೆ.
ರಾಷ್ಟ್ರದಲ್ಲಿ ಬುಲೆಟ್ ಟ್ರೈನ್‌ಗಳನ್ನು ಕೆಲವು ಮಾರ್ಗಗಳಲ್ಲಿ ಅಳವಡಿಸುವ ಪ್ರಧಾನಿ ಅವರ ಆಲೋಚನೆ ಈಗಾಗಲೇ ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂದಿದ್ದಾರೆ.
ಉನ್ನತ ಮೂಲಗಳ ಪ್ರಕಾರ ಚೆನ್ನೈ-ಮೈಸೂರು ನಡುವಿನ ಬುಲೆಟ್ ಟ್ರೈನ್ ಯೋಜನೆಗಾಗಿಯೇ ಪ್ರತ್ಯೇಕ ರೈಲು ಮಾರ್ಗ ನಿರ್ಮಾಣವಾಗಲಿದೆ, ಕೆಲವೆಡೆ ರೈಲ್ವೆ ಎಲಿವೇಟೆಡ್ ಮಾರ್ಗ ಅಳವಡಿಸಲಾಗುವುದು ಎಂಬ ಮಾಹಿತಿ ಇದೆ.