ಬೆಂಗಳೂರು:ವಿದ್ಯಾವಂತರಲ್ಲೇ ಜಾತಿ ಪ್ರಜ್ಞೆ ಹೆಚ್ಚಾಗುತ್ತಿದೆ, ಡಾಕ್ಟರ್ ಓದಿದವರೂ ಮೌಢ್ಯ ಬಿಟ್ಟಿಲ್ಲ, ಹಣೆಬರಹ, ಕರ್ಮ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡಿದ್ದು, ವಿದ್ಯಾರ್ಥಿಗಳು ಮೌಢ್ಯದಲ್ಲಿ ನಂಬಿಕೆ ಇಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಕರೆ ನೀಡಿದ್ದಾರೆ.
ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ದಲಿತ ಸಂಘರ್ಷ ಸಮಿತಿ ನಡೆಸಿದ, “ನಮಗೆ ಸರಾಯಿ ಅಂಗಡಿ ಬೇಡ, ವಸತಿ ಶಾಲೆ ಬೇಕು” ಎನ್ನುವ ಹೋರಾಟದಿಂದ ಪ್ರೇರಿತನಾಗಿ ಮೊದಲ ಬಜೆಟ್ ಮಂಡಿಸುವ ವೇಳೆ ಗ್ರಾಮೀಣ ಭಾಗದಲ್ಲಿ ಮೊರಾರ್ಜಿ ಶಾಲೆಗಳನ್ನು ಆರಂಭಿಸಿದೆ ಎಂದರು.
ಅಂದಿನಿಂದ ನಿರಂತರವಾಗಿ ಮೊರಾರ್ಜಿ ವಸತಿ ಶಾಲೆಗಳನ್ನು ತೆರೆಯುತ್ತಲೇ ಇದ್ದೇನೆ, ಸಮಾಜ ಕಲ್ಯಾಣ ಇಲಾಖೆಯಲ್ಲಿ 833 ವಸತಿ ಶಾಲೆಗಳಿವೆ, ಅಲ್ಪಸಂಖ್ಯಾತ ಇಲಾಖೆಯದೂ ಸೇರಿ ಒಟ್ಟು 946 ವಸತಿ ಶಾಲೆಗಳಿವೆ.
ಈ ವರ್ಷ 20 ವಸತಿ ಶಾಲೆ
ಕೆಲವು ಹೋಬಳಿಗಳಲ್ಲಿ ಒಂದಕ್ಕಿಂತ ಹೆಚ್ಚು ವಸತಿ ಶಾಲೆಗಳಿವೆ, ಈ ವರ್ಷ 20 ವಸತಿ ಶಾಲೆಗಳನ್ನು ಆರಂಭಿಸಲು ಅನುಮತಿ ನೀಡಿದ್ದೇನೆ, ಹೋಬಳಿಗೊಂದು ವಸತಿ ಶಾಲೆ ನನ್ನ ಗುರಿ ಮತ್ತು ಉದ್ದೇಶವಾಗಿದೆ.
ಗ್ರಾಮೀಣ ಭಾಗದಲ್ಲಿ ಸರ್ವರಿಗೂ ಗುಣಮಟ್ಟದ ವೈಚಾರಿಕತೆ, ವೈಜ್ಞಾನಿಕತೆಯಿಂದ ಕೂಡಿದ ಶಿಕ್ಷಣ ದೊರೆಯಬೇಕು, ಜಾತಿ ವ್ಯವಸ್ಥೆ ಕಾರಣದಿಂದ ಸಮಾಜದಲ್ಲಿ ಅಸಮಾನತೆ ಸೃಷ್ಟಿಯಾಗಿದೆ, ಎಲ್ಲಾ ಜಾತಿ, ಜನ, ವರ್ಗದ ಮಕ್ಕಳಿಗೆ ಓದುವ ಅವಕಾಶ ಕಲ್ಪಿಸಿದ್ದು ಸಂವಿಧಾನ.
ಜಾತಿ ವ್ಯವಸ್ಥೆ ಕಾರಣದಿಂದ ಸಮಾಜದಲ್ಲಿ ಅಸಮಾನತೆ ಸೃಷ್ಟಿಯಾಗಿದೆ, ಇದನ್ನು ಹೋಗಲಾಡಿಸಬೇಕಿದೆ, ನನಗೆ ಶಿಕ್ಷಣ ಸಿಕ್ಕಿದ್ದರಿಂದಲೇ ಮುಖ್ಯಮಂತ್ರಿ ಆಗುವ ಅವಕಾಶ ದೊರೆಯಿತು, ಇಲ್ಲದಿದ್ದರೆ ನಾನೂ ಎಮ್ಮೆ, ಹಸು ಮೇಯಿಸುತ್ತಾ ಅಷ್ಟಕ್ಕೇ ಸೀಮಿತ ಆಗಬೇಕಾಗಿತ್ತು.
ವಿದ್ಯಾವಂತರಲ್ಲೇ ಜಾತಿ ಪ್ರಜ್ಞೆ
ಬುದ್ಧ, ಬಸವಣ್ಣ ಶತಮಾನಗಳಷ್ಟು ಹಿಂದೆಯೇ ಜಾತಿ ವ್ಯವಸ್ಥೆ ಅಳಿಸಲು ಶ್ರಮಿಸಿದರು, ಆದರೆ ವಿದ್ಯಾವಂತರಲ್ಲೇ ಜಾತಿಪ್ರಜ್ಞೆ ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪೋಷಕರು, ಶಿಕ್ಷಕರು ಮೊದಲು ಕಂದಾಚಾರ, ಮೌಢ್ಯದಿಂದ ಹೊರಬರಬೇಕು, ಆಗ ಮಕ್ಕಳೂ ವೈಜ್ಞಾನಿಕವಾಗಿ ಬೆಳೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ, ಮಕ್ಕಳು ಅಲ್ಪಮಾನವರಾಗದಂತೆ ಕಾಪಾಡುವ ಜವಾಬ್ದಾರಿ ಶಿಕ್ಷಕರು, ಪೋಷಕರ ಮೇಲಿದೆ.
ಜಾತಿ ವ್ಯವಸ್ಥೆ ಶಿಥಿಲವಾಗಲು ದಲಿತರು, ಹಿಂದುಳಿದವರಿಗೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಶಕ್ತಿ ಬರಬೇಕು, ಅಂಬೇಡ್ಕರ್ ಅವರು ಸಂವಿಧಾನ ಸಭೆಯಲ್ಲಿ ಆಡಿದ ಮಾತುಗಳು ಇವತ್ತಿಗೂ ಬಹಳ ಪ್ರಸ್ತುತವಾಗಿದೆ.
ಶೇ.100 ಅಂಕ ಪಡೆಯಿರಿ
ಸರ್ಕಾರಿ ವಸತಿ ಶಾಲೆಗಳ ಮಕ್ಕಳು ಈ ಬಾರಿ ಶೇ.96 ರಷ್ಟು ಫಲಿತಾಂಶ ಪಡೆದಿದ್ದಾರೆ, ಮುಂದಿನ ಬಾರಿ ಶೇ.100 ರಷ್ಟು ಅಂಕ ಪಡೆಯಬೇಕು ಎಂದು ಕಿವಿಮಾತು ಹೇಳಿದರು.
ಮುಂದುವರೆದ ಜಾತಿಯ ಹೆಣ್ಣು ಮಕ್ಕಳಿಗೂ ಶಿಕ್ಷಣ ಕಲಿಯುವ ಅವಕಾಶ ಇರಲಿಲ್ಲ, ಎಲ್ಲಾ ಜಾತಿಯ ಹೆಣ್ಣುಮಕ್ಕಳೂ ಶಿಕ್ಷಣದ ವಿಚಾರದಲ್ಲಿ ಶೋಷಿತರಾಗಿದ್ದವರೇ, ಈಗ ಹೆಣ್ಣು ಮಕ್ಕಳೇ ಶಿಕ್ಷಣದಲ್ಲಿ ಮುಂದಿರುವುದು ಖುಷಿ ಆಗುತ್ತದೆ.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸಾಧನೆಗೆ ನೆರವಾದ ಎಲ್ಲಾ ಶಿಕ್ಷಕರಿಗೆ ಮುಖ್ಯಮಂತ್ರಿಗಳು ಅಭಿನಂದನೆ ಸಲ್ಲಿಸಿದರು.