ಬೆಂಗಳೂರು:ಚಿತ್ರ ನಟ ದರ್ಶನ್ ವಿರುದ್ಧದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಲಾಜಿಲ್ಲದೇ, ಯಾವುದೇ ಒತ್ತಡಕ್ಕೆ ಒಳಗಾಗದೇ ನಡೆಯುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆ ಪ್ರಕರಣದ ತನಿಖೆ ಸಡಿಲಗೊಳಿಸುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.
ಎಸ್‌ಪಿಪಿ ಬದಲಾವಣೆ ಪ್ರಸ್ತಾವನೆ ಇಲ್ಲ
ರೇಣುಕಾಸ್ವಾಮಿ ಕೊಲೆ ಪ್ರಕರಣದ ಸರ್ಕಾರಿ ಅಭಿಯೋಜಕರ ಬದಲಾವಣೆ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ, ಎಸ್‌ಪಿಪಿ ಬದಲಾವಣೆ ಮಾಡಿದರೂ ಅದರಲ್ಲೇನು ತಪ್ಪಿಲ್ಲ, ಕಾರಣ ಇಟ್ಟುಕೊಂಡೇ ತೀರ್ಮಾನ ತೆಗೆದುಕೊಳ್ಳಲಾಗಿರುತ್ತದೆ.
ಪಬ್ಲಿಕ್ ಪ್ರಾಸಿಕ್ಯೂಟರ್ ಬದಲಾಯಿಸುವ ಸಂದರ್ಭ ಬಂದರೆ ಕಾರಣ ಇರುತ್ತದೆ, ಇಲ್ಲದೇ ಮಾಡುವುದಿಲ್ಲ, ಕಾನೂನು ಸಲಹೆಗಾರರು ನೀಡುವ ಸಲಹೆಗಳ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.
ಎಲ್ಲರೂ ಕಾನೂನಿಗೆ ಬದ್ಧವಾಗಿಯೇ ಕೆಲಸ ಮಾಡಬೇಕಾಗುತ್ತದೆ, ಕಾನೂನು ಬಿಟ್ಟು ಹೋಗಲಾಗದು, ಕಾನೂನು ಪ್ರಕಾರವೇ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಸಹಾ ಕೆಲಸ ಮಾಡಬೇಕು, ಯಾರನ್ನೇ ನೇಮಿಸಿದರೂ ಕಾನೂನು ಪುಸ್ತಕ ಒಂದೇ ಅಲ್ಲವೇ, ಅದರ ಪ್ರಕಾರವೇ ಕೆಲಸ ಮಾಡಬೇಕಾಗುತ್ತದೆ ಎಂದರು.
ಅಗತ್ಯವಿದ್ದರೆ ತನಿಖೆ
ನಟ ದರ್ಶನ್ ಅವರ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ನಾಪತ್ತೆ ಪ್ರಕರಣವನ್ನು ಪೊಲೀಸರು ಪರಿಶೀಲನೆ ಮಾಡುತ್ತಾರೆ, ಪ್ರಕರಣ ತನಿಖೆ ಅಗತ್ಯವಿದ್ದರೆ ಮಾಡುತ್ತಾರೆ, ಬೇಕಿದ್ದರೆ ಸರ್ಕಾರದ ಅನುಮತಿಯನ್ನೂ ನೀಡಲಾಗುವುದು.
ದರ್ಶನ್ ಪ್ರಕರಣಕ್ಕೂ ಶ್ರೀಧರ್ ಎಂಬುವರ ಆತ್ಮಹತ್ಯೆಗೂ ಸಂಬಂಧ ಇದ್ದರೆ ತನಿಖೆ ಮಾಡುತ್ತಾರೆ, ಪ್ರತ್ಯೇಕವಾಗಿ ತನಿಖೆ ನಡೆಸಬೇಕು ಅಂತ ಸರ್ಕಾರವನ್ನು ಕೇಳುತ್ತಾರೆ, ಕಾರಣಗಳನ್ನು ಆಧರಿಸಿ ತೀರ್ಮಾನ ಕೈಗೊಳ್ಳುತ್ತೇವೆ, ಮರು ತನಿಖೆ ನಡೆಸಲು ಅನುಮತಿ ಕೇಳಿದರೆ ನೀಡಲಾಗುವುದು ಎಂದರು.
ಬಿಜೆಪಿ ರಸ್ತೆ ತಡೆ
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ರಸ್ತೆ ತಡೆ, ಮುಖ್ಯಮಂತ್ರಿಗೆ ಘೇರಾವ್ ಸಂಬಂಧ ಏನೇನು ಕ್ರಮ ಕೈಗೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇವೆ, ರಸ್ತೆ ತಡೆ ನಡೆಸಲು ಪೊಲೀಸರು ಅನುಮತಿ ಕೊಡುತ್ತಾರೆ, ಅನುಮತಿ ಕೊಟ್ಟಿದ್ದರೆ ಸಮಂಜಸವಾಗಿರುತ್ತದೆ.
ರಸ್ತೆ ತಡೆ ನಡೆಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ ಈ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
ಪ್ರತಿಭಟನೆ ಬೇಡ ಎನ್ನಲಾಗದು ಅದು ಅವರ ಹಕ್ಕು, ಸಾರ್ವಜನಿಕರಿಗೆ ತೊಂದರೆ ಆಗದಂತೆ ಮಾಡಲಿ, ಈಗಾಗಲೇ ಫ್ರೀಡಂಪಾರ್ಕ್ ಮತ್ತು ಪ್ರತಿ ಜಿಲ್ಲೆಯಲ್ಲಿ ಪ್ರತಿಭಟನೆ ಮಾಡಿದ್ದಾರೆ, ಮತ್ತೆ ರಸ್ತೆಗೆ ಇಳಿಯುತ್ತೇವೆ ಎಂದರೆ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದರು.
ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಇರುವುದರಿಂದ ಪಕ್ಕದ ರಾಜ್ಯದವರು ಸಹಾ ಇಲ್ಲಿಗೆ ಬಂದು ಖರೀದಿಸುತ್ತಿದ್ದಾರೆ, ದರ ಇಳಿಕೆ ಪ್ರಶ್ನೆಯೇ ಇಲ್ಲ ಎಂದರು.