ಬೆಂಗಳೂರು:ಕನ್ನಡ ಭಾಷೆ, ನೆಲ, ಜಲ ಸಂರಕ್ಷಣೆ ಕರ್ತವ್ಯ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ, ಕರ್ನಾಟಕದಲ್ಲಿ ಕನ್ನಡ ವಾತಾವರಣ ನಿರ್ಮಾಣ ಮಾಡುವುದು ಅತ್ಯಂತ ಅವಶ್ಯಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವ ಅಂಗವಾಗಿ ವಿಧಾನಸೌಧದ ಪಶ್ಚಿಮದ್ವಾರದ ಬಳಿ ನಾಡದೇವಿ ಭುವನೇಶ್ವರಿಯ ಕಂಚಿನ ಪ್ರತಿಮೆ ಸ್ಥಾಪನೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮಾತೃಭಾಷೆಯಲ್ಲಿ ಮಾತನಾಡುವುದು ಹೆಮ್ಮೆಯ ಸಂಗತಿಯಾಗಬೇಕು, ಪ್ರತಿಯೊಬ್ಬರೂ ಕರ್ನಾಟಕದಲ್ಲಿ ಬಾಳಿ-ಬದುಕುತ್ತಿರುವ ಜನರೊಂದಿಗೆ ಕನ್ನಡದಲ್ಲಿಯೇ ಮಾತನಾಡುತ್ತೇನೆ, ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡುವುದಿಲ್ಲ ಎಂದು ತೀರ್ಮಾನ ಮಾಡಬೇಕು ಎಂದರು.
ಮಾತೃಭಾಷೆಯಲ್ಲಿಯೇ ವ್ಯವಹರಿಸಬೇಕು
ಕನ್ನಡಿಗರು ಉದಾರಿಗಳು, ಬೇರೆ ಭಾಷೆ ಮಾತನಾಡುವವರೂ ಕನ್ನಡ ಕಲಿಯದೆ ಬದುಕುವ ವಾತಾವರಣ ಕರ್ಣಾಟಕದಲ್ಲಿದೆ, ತಮಿಳುನಾಡು, ಆಂಧ್ರ, ಕೇರಳದಲ್ಲಿ ಅವರ ಮಾತೃಭಾಷೆಯಲ್ಲಿಯೇ ಮಾತನಾಡುತ್ತಾರೆ, ನಾವೂ ನಮ್ಮ ಮಾತೃಭಾಷೆಯಲ್ಲಿಯೇ ವ್ಯವಹರಿಸಬೇಕು, ಅದು ನಮಗೆ ಹೆಮ್ಮೆಯ ವಿಷಯವಾಗಬೇಕು, ಇದರಲ್ಲಿ ಕೀಳರಿಮೆ ಅಗತ್ಯವಿಲ್ಲ.
ಕರ್ನಾಟಕದಲ್ಲಿ ವಾಸ ಮಾಡುವವರು ಕನ್ನಡ ಕಲಿಯಬೇಕು, ಕನ್ನಡ ವಾತಾವರಣ ನಿರ್ಮಾಣ ಮಾಡುವುದು ನಮ್ಮೆಲ್ಲರ ಕರ್ತವ್ಯ, ಇಲ್ಲಿ ವಾಸ ಮಾಡುವವರೂ ಕನ್ನಡ ಕಲಿಯಲೇಬೇಕು, ಕನ್ನಡಿಗರು ದುರಭಿಮಾನಿಗಳಲ್ಲ, ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು, ಬೇರೆ ರಾಜ್ಯಗಳಲ್ಲಿರುವ ದುರಭಿಮಾನಿಗಳಂತೆ ನಾವು ಆಗಬೇಕಿಲ್ಲ, ನಮ್ಮ ಭಾಷೆ, ನೆಲ, ನಾಡಿನ ಬಗ್ಗೆ ಗೌರವ, ಅಭಿಮಾನ ಬೆಳೆಸಿಕೊಳ್ಳಬೇಕು.
ಭುವನೇಶ್ವರಿ ತಾಯಿ ಕಂಚಿನ ಪ್ರತಿಮೆ
ಭುವನೇಶ್ವರಿ ತಾಯಿ ಪ್ರತಿಮೆ ಸ್ಥಾಪನೆ ಕಾಮಗಾರಿ ಬರುವ ನವೆಂಬರ್ 1 ರೊಳಗೆ ಪೂರ್ಣಗೊಳ್ಳಬೇಕು, ಕೆಲಸ ಈಗಾಗಲೇ ಪ್ರಾರಂಭವಾಗಿದೆ, ಹಣದ ಕೊರತೆ ಇಲ್ಲ, ವಿಧಾನ ಸೌಧದ ಆವರಣದಲ್ಲಿ ಸುಮಾರು 25 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣವಾಗಲಿದೆ.
ನವೆಂಬರ್ 1 ರಂದು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ತುಂಬಿವೆ, ’ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಘೋಷವಾಕ್ಯದೊಂದಿಗೆ ಇಡೀ ವರ್ಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಶಕ್ತಿ ಕೇಂದ್ರದಲ್ಲಿ ನಾಡದೇವಿ ಪ್ರತಿಮೆ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ವಿಧಾನಸೌಧದ ಆವರಣದಲ್ಲಿ ಡಾ.ಅಂಬೇಡ್ಕರ್, ಬಸವಣ್ಣ, ಕೆಂಪೇಗೌಡ ಸೇರಿದಂತೆ ಅನೇಕ ನಾಯಕರ ಪ್ರತಿಮೆಗಳಿವೆ, ಶಕ್ತಿ ಕೇಂದ್ರದಲ್ಲಿ ನಾಡದೇವಿ ಭುವನೇಶ್ವರಿ ತಾಯಿ ಪ್ರತಿಮೆ ಇರಬೇಕು ಎಂದರು.
ಕನ್ನಡ ನಾಮಫಲಕ ಕಡ್ಡಾಯ ಕಾನೂನು ಮಾಡಲಾಯಿತು, ಕನ್ನಡ ಉಳಿಸುವ ಕೆಲಸವನ್ನು ಮಾಡಿದ್ದೇವೆ, ಯಾರು ಶಾಶ್ವತವಲ್ಲ, ನಾವು ಮಾಡುವ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ ಎಂದರು.