ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಹಳದಿ ಮುನ್ನೆಚ್ಚರಿಕೆ
ಬೆಂಗಳೂರು : ಒಂದು ವಾರದಿಂದ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದ ಮುಂಗಾರು ಮಳೆ ಈಗ ಚುರುಕಾಗಿದೆ. ರಾಜ್ಯದ ಹಲವೆಡೆ ಮತ್ತೆ ಮಳೆ ಪ್ರಾರಂಭವಾಗಿದೆ.
ಮುಂದಿನ 2 ರಿಂದ 3 ದಿನಗಳವರೆಗೆ ಅತ್ಯಧಿಕ ಮಳೆಯಾಗುವ ಲಕ್ಷಣಗಳಿವೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಈ ಜಿಲ್ಲೆಗಳಲ್ಲಿ ಹಳದಿ ಮುನ್ನೆಚ್ಚರಿಕೆ ನೀಡಿದ್ದು, ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.
ಜೂನ್ 22 ಮತ್ತು 24 ರಂದು ರಾಜ್ಯದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ತಜ್ಞರು ನೀಡಿದ್ದಾರೆ. ಎಲ್ಲೆಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಲಿದೆಯೋ ಆಯಾ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಮುನ್ಸೂಚನೆ ನೀಡಲಾಗಿದೆ.
ಕರಾವಳಿಯಲ್ಲಿ ಕೆಂಪು ಎಚ್ಚರಿಕೆ ನೀಡಲಾಗಿದೆ.
ಶನಿವಾರದಿಂದ ಸೋಮವಾರದವರೆಗೆ ದಕ್ಷಿಣ ಕರ್ನಾಟಕದಲ್ಲೂ ಭಾರೀ ಮಳೆಯ ಮುನ್ಸೂಚನೆಗಳಿವೆ.
ಈಗಾಗಲೇ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿದೆ.
ಮುಂಗಾರು ಮಳೆ ಈ ಬಾರಿ ಬೇಗ ಆರಂಭವಾಗಿದ್ದು, ರಾಜ್ಯಾದ್ಯಂತ ಉತ್ತಮ ಮಳೆಯಾಗಿದೆ. ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ಬರದಿಂದ ಕಂಗೆಟ್ಟಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಈ ನಡುವೆ ಮುಂಗಾರು ದುರ್ಬಲಗೊಂಡರೂ ಅಲ್ಲಲ್ಲಿ ಚದುರಿದಂತೆ ಮಳೆ ಮುಂದುವರೆದಿತ್ತು. ಈಗ ಅಧಿಕ ಮಳೆ ತರುವ ಮಾರುತಗಳು ಸೃಷ್ಟಿ ಯಾಗತೊಡಗಿವೆ.
ಕರ್ನಾಟಕದಲ್ಲಿ ಮತ್ತೆ ಮಳೆ ತರುವ ವಾತಾವರಣ ಸೃಷ್ಟಿಯಾಗಿದ್ದು, ಜೂನ್ 22ರಿಂದ ಮೂರ್ನಾಲ್ಕು ದಿನ ಭಾರೀ ಮಳೆಯಾಗಲಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮಳೆಯಾಗಲಿದೆ. ಆದರೆ, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರೀ ಮಳೆ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಕಳೆದ ವರ್ಷ ಮಳೆ ಕೈಕೊಟ್ಟು ಭೀಕರ ಬರ ಪರಿಸ್ಥಿತಿ ಉಂಟಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಪರಿಹಾರ ಧನದ ಸಂಘರ್ಷ ಉಂಟಾಗಿತ್ತು.
ಆದರೆ, ಈ ಬಾರಿ ಒಳ್ಳೆಯ ಅಂದರೆ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ಇದುವರೆಗೂ ಸಾಕಷ್ಟು ಮಳೆಯಾಗಿ ಎಲ್ಲೆಡೆ ಹಚ್ಚ ಹಸುರಿನ ವಾತಾವರಣ ಕಂಡುಬರುತ್ತಿದೆ. ಆದರೂ ಕುಡಿಯುವ ನೀರು, ಜಲ ವಿದ್ಯುತ್ ಹಾಗೂ ಬೆಳೆಗೆ ನೀರೊದಗಿಸುವ ಜಲಾಶಯಗಳಿಗೆ ನಿರೀಕ್ಷಿತ ಪ್ರಮಾಣದ ಒಳಹರಿವು ಇಲ್ಲ.
ಒಟ್ಟಾರೆ ಇದುವರೆಗೆ ಶೇ. 21ರಷ್ಟು ಮಾತ್ರ ನೀರು ಜಲಾಶಯಗಳಲ್ಲಿ ಸಂಗ್ರಹವಾದ ಮಾಹಿತಿ ಇದೆ. ಮತ್ತೊಮ್ಮೆ ಕರ್ನಾಟಕದಲ್ಲಿ ಅಧಿಕ ಮಳೆಯಾಗುವ ಲಕ್ಷಣಗಳು ಇರುವುದರಿಂದ ಜಲಾಶಯಗಳಿಗೂ ಸಾಕಷ್ಟು ನೀರು ಹರಿದುಬರುವ ನಿರೀಕ್ಷೆ ಇದೆ.