ನವದೆಹಲಿ:ಪ್ರತಿಯೊಬ್ಬರೂ ಯೋಗವನ್ನು ಜೀವನ ಶೈಲಿಯನ್ನಾಗಿ ಮಾಡಿಕೊಳ್ಳಬೇಕು ಎಂದು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಕರೆ ನೀಡಿದರು.
ನೋಯ್ಡಾದಲ್ಲಿ ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಗತ್ತಿಗೆ ಭಾರತ ಕೊಟ್ಟ ಅಮೂಲ್ಯ ಕೊಡುಗೆ ಯೋಗ, ಭಾರತ ಯೋಗದ ಮೂಲಕ ಇಡೀ ಜಗತ್ತನ್ನು ಬೆಸೆದಿದೆ, ಯೋಗವೆಂದರೆ ’ಜೋಡಿಸು’ ’ಸೇರಿಸು’ ’ಕೂಡಿಸು’ ಎಂಬ ಅರ್ಥ, ಇದಕ್ಕೆ ಸಾರ್ಥಕತೆ ತರುವಲ್ಲಿ ಯೋಗ ಇಡೀ ಜಗತ್ತನ್ನು ಬೆಸೆದುಕೊಂಡು ಬೆಳಗುತ್ತಿದೆ ಎಂದರು.
ಯೋಗವನ್ನು ವಿಶ್ವಸಂಸ್ಥೆಗೆ ತೆಗೆದುಕೊಂಡು ಹೋಗಿ ಜಾಗತಿಕ ಮಟ್ಟದಲ್ಲಿ ಪ್ರಚಾರಗೊಳಿಸಿ ಭಾರತದ ನೆಲದಲ್ಲಿ ನಿಂತು ಜಗತ್ತನ್ನು ನೋಡುವ ಹಿರಿಮೆ ತಂದುಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮನಸಾರೆ ಅಭಿನಂದಿಸುತ್ತೇನೆ.
ಯೋಗ ವಿಕಸನಕ್ಕೆ ಪೂರಕ
ಯೋಗ ವಿಕಸನಕ್ಕೆ ಪೂರಕ, ಮನುಕುಲಕ್ಕೆ ಪೂರಕ, ಸಾಧನೆಯ ಮೆಟ್ಟಿಲೇರಲು ಪೂರಕ, ಯೋಗಾಭ್ಯಾಸ ಆತ್ಮವಿಶ್ವಾಸ ಹೆಚ್ಚಿಸುತ್ತದೆ, ಮನಸ್ಸನ್ನು ನಿಯಂತ್ರಿಸಿ ದೇಹವನ್ನು ಪುನರುಜ್ಜೀವನಗೊಳಿಸುತ್ತದೆ, ಪ್ರತಿದಿನ ಯೋಗ ಮಾಡುವುದರಿಂದ ದೇಹ, ಮನಸ್ಸು ಚೈತನ್ಯಶೀಲವಾಗಿರುತ್ತದೆ.
ಯೋಗಾಭ್ಯಾಸಕ್ಕೆ 5,000 ವರ್ಷಗಳ ಇತಿಹಾಸವಿದೆ, ಋಗ್ವೇದದಲ್ಲಿ ಯೋಗದ ಬಗ್ಗೆ ಉಲ್ಲೇಖವಿದೆ, ಯೋಗ ದೇಶಕ್ಕೆ ಆರೋಗ್ಯವಂತ ಮಾನವ ಸಂಪನ್ಮೂಲ ಸೃಷ್ಟಿ ಮಾಡುತ್ತದೆ, ದೃಢತೆಯ ನಾಯಕತ್ವಕ್ಕೆ ಯೋಗ ದೊಡ್ಡ ಕಾಣಿಕೆ ನೀಡುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಯೋಗವನ್ನೇ ಬದುಕು ಮಾಡಿಕೊಂಡಿರುವ ನಿಜಯೋಗಿ, ಅವರ ಜೀವನ ಶೈಲಿ ಯುವಕರಿಗೆ ಪ್ರೇರಣೆಯಾಗಿದೆ, ಇಡೀ ಜಗತ್ತು ಯೋಗವನ್ನು ಅವಲಂಬಿಸುತ್ತಿದೆ ಎಂದರೆ ಭಾರತವನ್ನು ವಿಶ್ವಗುರುವಾಗಿ ಪರಿಭಾವಿಸುತ್ತಿದೆ ಎಂದೇ ಅರ್ಥ ಎಂದರು.