ಲೋಕಸಭಾ ಚುನಾವಣಾ ಹಿನ್ನಡೆ ಡಿ.ಕೆ.ಶಿವಕುಮಾರ್ ಹೆಗಲಿಗೆ
ಬೆಂಗಳೂರು : ಲೋಕಸಭಾ ಚುನಾವಣಾ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಮೂರು ಉಪ ಮುಖ್ಯಮಂತ್ರಿಗಳ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ.
ಕರ್ನಾಟಕದಲ್ಲಿ ಪಕ್ಷ ಅಧಿಕಾರದಲ್ಲಿದ್ದರೂ ಲೋಕಸಭಾ ಚುನಾವಣೆಯಲ್ಲಿ ಆದ ಹಿನ್ನಡೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಗಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರು ಹಾಕಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಅಗತ್ಯವಿದೆ ಎಂದಿದ್ದಾರೆ.
ಈ ಬಗ್ಗೆ ಪಕ್ಷದ ವರಿಷ್ಠರು, ಮುಖ್ಯಮಂತ್ರಿ ಹಾಗೂ ಸಾರ್ವಜನಿಕವಾಗಿ ಚರ್ಚೆಯ ಅಗತ್ಯವಿದೆ. ಚುನಾವಣಾ ಸೋಲಿನಿಂದ ಸರ್ಕಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ನಾಯಕತ್ವದ ಬಗ್ಗೆಯೂ ಅಪಸ್ವರ ಇಲ್ಲ.
ಆದರೆ, ಕೆಪಿಸಿಸಿಯಲ್ಲಿ ಬದಲಾವಣೆಯ ಅಗತ್ಯವಿದೆ ಎಂದು ಸತೀಶ್ ಒತ್ತಿ ಹೇಳುವುದರ ಮೂಲಕ ಶಿವಕುಮಾರ್ ಅಧಿಕಾರವನ್ನು ಮೊಟಕುಗೊಳಿಸಬೇಕೆಂಬ ಪರೋಕ್ಷ ಸಂದೇಶವನ್ನು ವರಿಷ್ಠರಿಗೆ ನೀಡಿದ್ದಾರೆ.
ಚುನಾವಣೆಯಲ್ಲಿ ಸೋತಿದ್ದನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಏಕೆ ಸೋತಿದ್ದೇವೆ ಎಂಬುದು ಜನರಿಗೆ ಹಾಗೂ ಕಾರ್ಯಕರ್ತರಿಗೂ ಗೊತ್ತಾಗಬೇಕು.
ಚುನಾವಣೆಗೂ ಮುನ್ನವೇ ಪರಿಶಿಷ್ಟ ಜಾತಿ, ವರ್ಗ, ವೀರಶೈವರಿಗೆ ಒಂದೊಂದು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಬಡ್ತಿ ಅಥವಾ ನೇಮಕಾತಿ ಮಾಡಿದ್ದರೆ ನಮಗೆ ಹೆಚ್ಚು ಸ್ಥಾನ ಬರುತ್ತಿತ್ತು.
ಪಕ್ಷದ ಹಿತದ ಉದ್ದೇಶದಿಂದಲೇ ನಾವುಗಳು ಉಪ ಮುಖ್ಯಮಂತ್ರಿ ಸ್ಥಾನಗಳ ಬೇಡಿಕೆಯನ್ನು ಇಟ್ಟಿದ್ದೆವು. ಈಗಲಾದರೂ ವರಿಷ್ಠರು ಹೆಚ್ಚು ಸ್ಥಾನಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ನಮ್ಮ ಬೇಡಿಕೆಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ನಡೆಯಲಿ. ಒಬ್ಬರಿಗೇ ಎಲ್ಲಾ ಹುದ್ದೆಗಳನ್ನು ನೀಡಿದರೆ, ಪಕ್ಷಕ್ಕೆ ದುಡಿದ ಬೇರೆ ನಾಯಕರ ಗತಿಯೇನು ಎಂದು ಪ್ರಶ್ನಿಸಿದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಶಿವಕುಮಾರ್ ಕಣಕ್ಕಿಳಿಯುವ ಬಗ್ಗೆ ಪರೋಕ್ಷವಾಗಿ ಆಕ್ಷೇಪ ವ್ಯಕ್ತಪಡಿಸಿದ ಸಚಿವರು, ಅಲ್ಲಿಯೂ ನಮ್ಮ ಒಳ್ಳೆಯ ಕಾರ್ಯಕರ್ತರಿರುತ್ತಾರೆ. ಅಂತಹವರನ್ನು ಹುಡುಕಿ ಕಣಕ್ಕಿಳಿಸಬೇಕು.
ಉಪ ಚುನಾವಣೆಗೆ ಇನ್ನೂ ಆರು ತಿಂಗಳ ಸಮಯಾವಕಾಶ ಇದೆ. ಕಾದು ನೋಡೋಣ. ಆದರೆ, ಸಮರ್ಥ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಸ್ಥಳೀಯವಾಗಿ ಈಗಿನಿಂದಲೇ ನಡೆಯಬೇಕು ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಮೂರು ತಿಂಗಳು ಮುಗಿಯುತ್ತಿದ್ದಂತೆ ಅವರ ಸಹೋದ್ಯೋಗಿಗಳಾದ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ, ಎಂ.ಬಿ.ಪಾಟೀಲ್ ಹಾಗೂ ಸತೀಶ್ ಜಾರಕಿಹೊಳಿ ಉಪಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು.
ಅಷ್ಟೇ ಅಲ್ಲ ಸಿದ್ದರಾಮಯ್ಯ ಅವರು ಪೂರ್ಣಾವಧಿ ಅಧಿಕಾರದಲ್ಲಿರುತ್ತಾರೆ ಎಂಬ ವಿಚಾರವನ್ನು ಬಹಿರಂಗವಾಗೇ ಚರ್ಚಿಸಿ, ಶಿವಕುಮಾರ್ ನಾಯಕತ್ವಕ್ಕೆ ಪರೋಕ್ಷ ವಿರೋಧ ವ್ಯಕ್ತಪಡಿಸಿದ್ದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಹೀನಾಯ ಸೋಲು ಅನುಭವಿಸಿದ ನಂತರ ಸಿದ್ದರಾಮಯ್ಯ ಬಣ ಮತ್ತೆ ಮುನ್ನೆಲೆಗೆ ಬಂದಿದೆ. ತಮ್ಮ ಹಳೇ ಬೇಡಿಕೆಗಳನ್ನು ಮತ್ತೆ ಮುಂದಿಡುವ ಜೊತೆಗೆ ಪಕ್ಷದಲ್ಲೂ ಬದಲಾವಣೆಗೆ ಆಗ್ರಹ ಪಡಿಸಿದೆ.