ಬೆಂಗಳೂರು:ಹಾಸನ ಪೆನ್ಡ್ರೈವ್ ಹಾಗೂ ವಿಡಿಯೊ ಹಂಚಿಕೆ ಆರೋಪಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಂಗೌಡ ವಿರುದ್ಧ ಎಸ್ಐಟಿ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ.
ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದನ್ನು ವಿಡಿಯೊ ಮಾಡಿ ವೈರಲ್ ಮಾಡಿರುವ ಆರೋಪದ ಮೇಲೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದ್ದು ಇದೇ ಪ್ರಕರಣದಲ್ಲಿ ಪ್ರೀತಂಗೌಡ ಅವರನ್ನೂ ಆರೋಪಿಯನ್ನಾಗಿ ಮಾಡಲಾಗಿದೆ.
ಎಡಗೈ-ಬಲಗೈ ಬಂಟರು ವಶಕ್ಕೆ
ಇದೇ ವೇಳೆ ಪ್ರೀತಂ ಗೌಡ ಅವರ ಎಡಗೈ-ಬಲಗೈ ಬಂಟರಂತಿರುವ ಶರತ್ ಹಾಗೂ ಕಿರಣ್ ಅವರನ್ನು ಈಗಾಗಲೇ ಎಸ್ಐಟಿ ತನ್ನ ವಶಕ್ಕೆ ತೆಗೆದುಕೊಂಡಿದೆ.
ಸಂತ್ರಸ್ತೆಯೊಬ್ಬರು ನೀಡಿರುವ ದೂರಿನ ಆಧಾರದ ಮೇಲೆ ಎಸ್ಐಟಿ ಪ್ರಕರಣ ದಾಖಲು ಮಾಡಿಕೊಂಡು ಮೊಕದ್ದಮೆ ಹೂಡಿದೆ, ಇದರಿಂದ ಪ್ರೀತಂಗೌಡ ಬಂಧನದ ಭೀತಿಯಲ್ಲಿದ್ದಾರೆ.
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ವಿರುದ್ಧ ಇದು ನಾಲ್ಕನೇ ಪ್ರಕರಣವಾಗಿದೆ. ನ್ಯಾಯಾಂಗ ಬಂಧನದಲ್ಲಿರುವ ಪ್ರಜ್ವಲ್ ಅವರನ್ನು ಎಸ್ಐಟಿ ಕಸ್ಟಡಿಗೆ ತೆಗೆದುಕೊಂಡಿದೆ.
ಇದರ ಮಧ್ಯೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜೂನ್ 29ರವರೆಗೂ ಪ್ರಜ್ವಲ್ ಅವರನ್ನು ಎಸ್ಐಟಿ ಕಸ್ಟಡಿಗೆ ನ್ಯಾಯಾಲಯ ನೀಡಿದೆ.