ನವದೆಹಲಿ:ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಅಕ್ರಮ ವರ್ಗಾವಣೆ ಪ್ರತಿಭಟಿಸಿ ಜೂನ್ 28ರಂದು ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಇಂದಿಲ್ಲಿ ತಿಳಿಸಿದ್ದಾರೆ.
ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಗಮದ ಹಣ ಅಕ್ರಮ ವರ್ಗಾವಣೆ ಜವಾಬ್ದಾರಿ ಹೊರಬೇಕು, ನಿಗಮ ಅಧ್ಯಕ್ಷರು ಶರಣಪ್ರಕಾಶ್ ಪಾಟೀಲ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣ ಅಕ್ರಮ ವರ್ಗಾವಣೆ ಹಗರಣವನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಿಬಿಐ ತನಿಖೆಗೆ ವಹಿಸಿದ್ದರೂ ತಮಗೆ ಬೇಕಾದಂತೆ ತನಿಖೆ ನಡೆಸಲು ರಾಜ್ಯ ಸರ್ಕಾರ ಆತುರಾತುರವಾಗಿ ಎಸ್‌ಐಟಿ ರಚಿಸಿದೆ ಎಂದು ಆರೋಪಿಸಿದರು.
ಎಸ್‌ಐಟಿ ತೇಪೆ ಹಚ್ಚುವ ಕೆಲಸ
ಎಸ್‌ಐಟಿ ತೇಪೆ ಹಚ್ಚುವ ಕೆಲಸ ಮಾಡುತ್ತಿದೆ, ಅಧಿಕಾರಿ ಮನೆಯಲ್ಲಿ ಒಂದಷ್ಟು ಹಣ ಸಿಕ್ಕಿದೆ ಎಂಬ ತಂತ್ರದ ಮೂಲಕ ರಾಜ್ಯ ಸರ್ಕಾರ ಕಣ್ಣೊರೆಸುವ ಕೆಲಸ ಮಾಡುತ್ತಿದೆ, ಹಗರಣ ಹಿನ್ನೆಲೆ ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ.
ಪೆಟ್ರೋಲ್, ಡೀಸೆಲ್, ಹಾಲಿನ ದರ ಹೆಚ್ಚಿಸಲಾಗಿದೆ, ಇಂಧನ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ.
ಸ್ಟ್ಯಾಂಪ್ ಡ್ಯೂಟಿ ಹೆಚ್ಚಿಸಲಾಗಿದೆ, ವಿದ್ಯುತ್ ದರ ಏರಿಕೆ ಮಾಡಿದ್ದಾರೆ, ರೈತರು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಸಿಕೊಳ್ಳಲು 2.5 ಲಕ್ಷ ರೂ. ನೀಡುವ ಪರಿಸ್ಥಿತಿ ನಿರ್ಮಿಸಲಾಗಿದೆ, ಬಿತ್ತನೆ ಬೀಜ ದರ ಶೇ.40 ರಿಂದ ಶೇ.50ರಷ್ಟು ಹೆಚ್ಚಾಗಿದೆ, ಹಾಲಿನ ದರ ಬಳಿಕ ಬಸ್ ಪ್ರಯಾಣ ದರವೂ ದುಬಾರಿ ಆಗಲಿದೆ, ಗ್ಯಾರಂಟಿ ಹೆಸರಿನಲ್ಲಿ ರಾಜ್ಯದ ಜನರನ್ನು ವಂಚಿಸಲಾಗುತ್ತಿದೆ.
ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳುತ್ತಿದೆ, ಅಭಿವೃದ್ಧಿ ಶೂನ್ಯತೆ ಕಾಡುತ್ತಿದೆ, ಅಭಿವೃದ್ಧಿ ಕಾರ್ಯಗಳಾಗದೆ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ತಲೆ ಎತ್ತಿಕೊಂಡು ಓಡಾಡಲು ಆಗುತ್ತಿಲ್ಲ ಎಂದರು.