ಬೆಂಗಳೂರು:ಕಾಂಗ್ರೆಸ್ ಶಾಸಕ ಎ.ಹರೀಶ್ ಗೌಡ ಸೇರಿದಂತೆ ಸಮಾಜದ ಗಣ್ಯ ವ್ಯಕ್ತಿಗಳನ್ನು ಹನಿಟ್ರ್ಯಾಪ್ ಮೂಲಕ ಬ್ಲ್ಯಾಕ್‌ಮೇಲ್ ಮಾಡಿದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಈ ತಂಡ ಮೈಸೂರು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಒಬ್ಬರು ಸೇರಿದಂತೆ ರಾಜಕೀಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯ ವ್ಯಕ್ತಿಗಳನ್ನು ಗುರುತಿಸಿ ಹನಿಟ್ರ್ಯಾಪ್ ಮೂಲಕ ಕೋಟ್ಯಂತರ ರೂ. ವಸೂಲಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು.
ಹರೀಶ್ ಗೌಡ ಸಿಸಿಬಿಗೆ ನೀಡಿದ ದೂರಿನ ಆಧಾರದ ಮೇಲೆ ಮೈಸೂರು ಮೂಲದ ಸಂತೋಷ್ ಮತ್ತು ಪುಟ್ಟರಾಜು ಎಂಬುವರನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿಗೆ ಶೋಧ ನಡೆಯುತ್ತಿದೆ.
ಪ್ರಭಾವಿಗಳ ಚಲನ ವಲನ ಮೇಲೆ ನಿಗಾ
ಸಂತೋಷ್, ಪುಟ್ಟರಾಜು ತಂಡದಲ್ಲಿ ಒಬ್ಬ ಯುವತಿ ಭಾಗಿಯಾಗಿದ್ದು, ಈ ಆರೋಪಿಗಳು ಪ್ರಭಾವಿಗಳ ಸಂಪರ್ಕ ಮಾಡಿ ಅವರ ಚಲನ ವಲನಗಳನ್ನು ಗಮನಿಸುತ್ತಿದ್ದರು.
ಗಣ್ಯರ ಮೊಬೈಲ್ ನಂಬರ್‌ಗಳನ್ನು ಪಡೆದು ಅವರು ಉಳಿದು ಕೊಳ್ಳುತ್ತಿದ್ದ ಹೋಟೆಲ್ ರೂಂನಲ್ಲಿ ರಹಸ್ಯ ಕ್ಯಾಮೆರಾ ಮೂಲಕ ವಿಡಿಯೊ ರೆಕಾರ್ಡ್ ಮಾಡುತ್ತಿದ್ದರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಚ್ಚಿಟ್ಟ ಕ್ಯಾಮೆರಾ ಮೂಲಕ ಅಶ್ಲೀಲ ಚಿತ್ರಗಳನ್ನು ಸೆರೆಹಿಡಿದು ಬಳಿಕ ಆ ಗಣ್ಯರಿಗೆ ವಿಡಿಯೊ ಕಳಿಸಿ ಇದು ನಿಮ್ಮದೇ ಎಂದು ಬೆದರಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು.
ಹರೀಶ್ ಗೌಡ ಅವರಿಗೂ ಮಾಹಿತಿ ನೀಡಿ ಬ್ಲ್ಯಾಕ್‌ಮೇಲ್ ಮಾಡಿ ಕೋಟ್ಯಂತರ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು.
ಸಿಸಿಬಿ ಪೊಲೀಸ್‌ಗೆ ದೂರು
ಸುಳ್ಳು ಅಶ್ಲೀಲ ಚಿತ್ರಗಳನ್ನು ತೋರಿಸಿ ತಮ್ಮನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆಂದು ಹರೀಶ್ ಗೌಡ ನೀಡಿದ ದೂರು ಆಧರಿಸಿ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.ಚಂದ್ರ ಗುಪ್ತ, ಕಳೆದ ಕೆಲವು ದಿನಗಳ ಹಿಂದೆ ಸಿಸಿಬಿ ಠಾಣೆಗೆ ದೂರು ದಾಖಲಾಗಿತ್ತು.
ಗ್ಯಾಂಗ್ ಒಂದು ಕೆಲವೊಂದು ಅಂಶಗಳ ಮೇಲೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂಬ ದೂರು ಬಂದಿತ್ತು.
ಗ್ಯಾಂಗ್‌ನ ಇಬ್ಬರ ಬಂಧನ
ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ಹೇಳಿಕೆಗಳನ್ನು ಪಡೆಯಲಾಗಿದೆ, ಇವರ ಗ್ಯಾಂಗ್‌ನಲ್ಲಿ ಮೂವರಿದ್ದು ಇದುವರೆಗೆ ಇಬ್ಬರನ್ನು ಬಂಧಿಸಲಾಗಿದೆ.
ಬೇರೆಯವರಿಗೂ ಇದೇ ರೀತಿ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ, ಆ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದರು.
ಈ ಗ್ಯಾಂಗ್ ಬೇರೆ ಬೇರೆ ಮೊಬೈಲ್ ನಂಬರ್‌ಗಳನ್ನು ಬಳಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದುದು ತಿಳಿದುಬಂದಿದೆ ಎಂದರು.