ಬೆಂಗಳೂರು:ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಸಮಾಜದ ಮುಖಂಡರನ್ನು ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಆಹ್ವಾನಿಸದಿರುವುದು ಹಾಗೂ ಕಾರ್ಯಕ್ರಮ ಪಟ್ಟಿಯಲ್ಲಿ ಹೆಸರು ಸೇರಿಸದಿರುವುದಕ್ಕೆ ಸರ್ಕಾರ ಬೇಷರತ್ ಕ್ಷಮೆಯಾಚಿಸಿದೆ.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸ್ವಾಗತ ಭಾಷಣ ಮಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ಕೊನೆಯ ಘಟ್ಟದಲ್ಲಿ ಸರ್ಕಾರದ ಪರವಾಗಿ ಈ ಸಂಬಂಧ ಕ್ಷಮೆಯಾಚಿಸಿದ್ದಲ್ಲದೆ, ಮುಂದೆ ಈ ರೀತಿ ಆಗದ ಹಾಗೆ ನೋಡಿಕೊಳ್ಳುವುದಾಗಿ ತಿಳಿಸಿದರು.
ಪ್ರತಿಪಕ್ಷದ ಒಕ್ಕಲಿಗ ಶಾಸಕರು ಗೈರು
ಸರ್ಕಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯಲಹಂಕ ಶಾಸಕ ವಿಶ್ವನಾಥ್ ಹೊರತುಪಡಿಸಿ, ಪ್ರತಿಪಕ್ಷದಲ್ಲಿನ ಒಕ್ಕಲಿಗ ಸಮಾಜಕ್ಕೆ ಸೇರಿದ ಯಾವುದೇ ಶಾಸಕರು ಭಾಗವಹಿಸಿರಲಿಲ್ಲ.
ಕಂಠೀರವ ಕ್ರೀಡಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದ ಕಾರಣ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ಒಂದು ಗಂಟೆ ತಡವಾಗಿ ಆಗಮಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನಸೌಧದ ಮುಂಭಾಗಲ್ಲಿರುವ ನಾಡಪ್ರಭು ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ನೇರವಾಗಿ ಕಂಠೀರವ ಕ್ರೀಡಾಂಗಣದಲ್ಲಿನ ಸಮಾರಂಭಕ್ಕೆ ತೆರಳಬೇಕಿತ್ತು.
ಕಾರ್ಯಕ್ರಮಕ್ಕೆ ಜನರು ಸೇರಿಲ್ಲ
ಕಾರ್ಯಕ್ರಮಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಲ್ಲ ಎಂಬ ಕಾರಣಕ್ಕೆ ಅವರು ಕಂಠೀರವಕ್ಕೆ ತೆರಳುವ ಬದಲು ವಿಧಾನಸೌಧದಲ್ಲಿನ ತಮ್ಮ ಕೊಠಡಿಗೆ ಮರಳಿದರು.
ಒಂದು ಗಂಟೆ ನಂತರ ಜನ ಸೇರಿದ್ದಾರೆ ಎಂಬ ಮಾಹಿತಿ ಪಡೆದು ಉಭಯ ನಾಯಕರು ಕಾರ್ಯಕ್ರಮಕ್ಕೆ ಆಗಮಿಸಿದರು.
ಸರ್ಕಾರದ ಪ್ರತಿನಿಧಿಗಳು ಬರುವುದಕ್ಕೂ ಮುನ್ನವೇ ಒಕ್ಕಲಿಗ ಸಮಾಜದ ಮೂವರು ಮಠಾಧೀಶರುಗಳು ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಉಪಸ್ಥಿತರಿದ್ದರು.