ಬೆಂಗಳೂರು:ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಇಂದಿಲ್ಲಿ ತಿಳಿಸಿದ್ದಾರೆ.
ಮಹರ್ಷಿ ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಹಾಗೂ ಇನ್ನಿತರ ವಿಷಯಗಳ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹೋರಾಟ ಸಂದರ್ಭದಲ್ಲಿ ಮಾತನಾಡಿದ ಅವರು, ಸಚಿವ ನಾಗೇಂದ್ರ ರಾಜೀನಾಮೆ ಕೊಟ್ಟಾಕ್ಷಣ ಪ್ರಕರಣ ಮುಗಿಯುವುದಿಲ್ಲ, ಭ್ರಷ್ಟಾಚಾರ ಹಗರಣವನ್ನು ಅಧಿಕಾರಿ ಮೇಲೆ ಹೊರಿಸಿ ತೇಪೆ ಹಾಕುವ ಕೆಲಸಕ್ಕೆ ಮುಖ್ಯಮಂತ್ರಿ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಕೋರ್ಟ್‌ನಿಂದಲೂ ಸರ್ಕಾರಕ್ಕೆ ಛೀಮಾರಿ
ನಾಗೇಂದ್ರ ಆಪ್ತರ ಬೆದರಿಕೆ ಬಗ್ಗೆ ಆರೋಪಿ ಸತ್ಯನಾರಾಯಣ ವರ್ಮಾ ಕೋರ್ಟ್‌ನಲ್ಲಿ ಹೇಳಿಕೆ ನೀಡುವ ಮೂಲಕ ಗಂಭೀರ ಆರೋಪ ಮಾಡಿದ್ದಾರೆ, ಕೋರ್ಟ್ ಸಹಾ ಸರ್ಕಾರಕ್ಕೆ ಛೀಮಾರಿ ಹಾಕಿದೆ, ಇದುವರೆಗೂ ನಾಗೇಂದ್ರ ಅವರನ್ನು ಎಸ್‌ಐಟಿ ವಿಚಾರಣೆಗೆ ಒಳಪಡಿಸಿಲ್ಲ, ಪ್ರಕರಣದಲ್ಲಿ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.
ಪೆಟ್ರೋಲ್, ಡೀಸೆಲ್, ಹಾಲಿನ ಬೆಲೆ ಎಲ್ಲಾ ಹೆಚ್ಚಾಗಿದೆ, ಸಿದ್ದರಾಮಯ್ಯ ಅದೆಷ್ಟು ದಿನ ಮುಖ್ಯಮಂತ್ರಿ ಆಗಿರುತ್ತಾರೋ ತಿಳಿಯದು, ಬೆಲೆ ಏರಿಕೆ ಬಗ್ಗೆ ಸಚಿವರು ಉಡಾಫೆ ಮಾತನಾಡುತ್ತಾರೆ, ಕಾಂಗ್ರೆಸ್ ಆಡಳಿತದಿಂದ ಜನ ಬೇಸತ್ತಿದ್ದಾರೆ, ಕಾಂಗ್ರೆಸ್ ಬಗ್ಗೆ ವಿಶ್ವಾಸ ಕಡಿಮೆಯಾಗಿದೆ.
ಹಾಲಿನ ದರ ಏರಿಕೆ ಪ್ರತಿಭಟಿಸಿ ರೈತ ಮೋರ್ಚಾ ನಾಳೆ ಹೋರಾಟ ನಡೆಸಲಿದೆ ಮುಂದೆ ಇನ್ನೂ ಹೋರಾಟದ ದಿನಗಳಿವೆ, ಸರ್ಕಾರ ಬದುಕಿದೆಯೇ ಎಂದು ಜನರು ಕೇಳುವಂತಾಗಿದೆ.
ಹೊಡೆದಾಡಿಕೊಳ್ಳುವ ಸ್ಥಿತಿ
ಲೋಕಸಭಾ ಚುನಾವಣೆ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒಬ್ಬರಿಗೊಬ್ಬರು ರಸ್ತೆಯಲ್ಲಿ ನಿಂತು ಹೊಡೆದಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರೆಂಬುದು ಮುಖ್ಯ ಅಲ್ಲ, ಅಭ್ಯರ್ಥಿ ಯಾರೇ ಆದರೂ ಬಿಜೆಪಿ-ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸಿ ಗೆಲ್ಲುತ್ತೇವೆ, ಶಿಗ್ಗಾಂವಿ, ಸಂಡೂರು ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ.
ಶೀಘ್ರದಲ್ಲೇ ಪಕ್ಷದ ಕೋರ್ ಕಮಿಟಿ ಸಭೆ ಕರೆದು ಅಭ್ಯರ್ಥಿಗಳ ಆಯ್ಕೆ ಮತ್ತು ಸರ್ಕಾರದ ವಿರುದ್ಧ ಹೋರಾಟ ಕುರಿತು ಚರ್ಚೆ ಮಾಡುತ್ತೇವೆ ಎಂದರು.