ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಿನ್ನೆ ದೆಹಲಿಯಲ್ಲಿ ನಡೆದ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರೂ ಮತ್ತು ಸಂಸದರ ಸಭೆಯಲ್ಲೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೇರವಾಗಿ ಮುಖಕ್ಕೆ ಮುಖ ಕೊಟ್ಟು ಮಾತನಾಡಲಿಲ್ಲ.
ಒಂದು ಹಂತದಲ್ಲಿ ಶಿವಕುಮಾರ್ ಮತ್ತು ಕುಮಾರಸ್ವಾಮಿ ಅಕ್ಕಪಕ್ಕದ ಆಸನದಲ್ಲಿ ಕುಳಿತಿದ್ದರೂ, ತಮ್ಮ ಎದುರಿಗಿದ್ದ ಕಡತಗಳನ್ನು ನೋಡುತ್ತಿದ್ದರೇ ಹೊರತು ಒಬ್ಬರಿಗೊಬ್ಬರು ಕಣ್ಣಿಗೆ ಕಣ್ಣು ಕೊಟ್ಟು ನೋಡಲಿಲ್ಲ.
ರಾಜಕೀಯ ಅಂತರ
ಸಹೋದರ ಎಚ್.ಡಿ.ರೇವಣ್ಣ ಅವರು ಜೈಲು ಸೇರಿದ ಪ್ರಕರಣದ ನಂತರ ಕುಮಾರಸ್ವಾಮಿ ಅವರು ಶಿವಕುಮಾರ್ ಅವರೊಂದಿಗೆ ರಾಜಕೀಯ ಅಂತರ ಕಾಯ್ದುಕೊಂಡಿದ್ದಾರೆ.
ಈ ಹಿಂದೆ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆ ಸಂದರ್ಭದಲ್ಲೂ ಇವರಿಬ್ಬರ ನಡುವೆ ಇಂತಹದ್ದೇ ಘಟನೆ ಜರುಗಿತ್ತು.
ಸಭೆಯಲ್ಲಿ ಬೆಂಗಳೂರು ವರ್ತುಲ ರಸ್ತೆಗೆ ಸಂಬಂಧಿಸಿದಂತೆ ಶಿವಕುಮಾರ್ ಪ್ರಸ್ತಾಪಿಸಿದಾಗ ಕುಮಾರಸ್ವಾಮಿ ಅವರೇ ಕೇಂದ್ರದ ಪರ ಉತ್ತರ ನೀಡುವ ಸಂದರ್ಭದಲ್ಲೂ ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತನಾಡಲಿಲ್ಲ.
ರಾಜ್ಯದ ಪಾಲನ್ನು ಮೊದಲು ಕೊಡಿ
ಸಭೆಯಲ್ಲಿ ಕೇಂದ್ರದ ಅನುದಾನ ವಿಚಾರ ಬಂದಾಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕುಮಾರಸ್ವಾಮಿ, ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಇಲ್ಲಿ ರಾಜಕೀಯ ಬೇಡ, ಆದರೆ, ಕೇಂದ್ರದ ಯೋಜನೆಗಳು ಪ್ರಕಟಗೊಂಡ ನಂತರ ಅದಕ್ಕೆ ಸರಿಸಮನಾದ ರಾಜ್ಯದ ಪಾಲನ್ನು ಮೊದಲು ಕೊಡಿ.
ಅದನ್ನು ಬಿಟ್ಟು ಕೇಂದ್ರದ ಮೇಲೆ ಟೀಕೆ ಮಾಡುವುದರಿಂದ ಪ್ರಯೋಜನವಿಲ್ಲ, ರಾಜ್ಯ ಹಣ ನೀಡದೆ ಕೇಂದ್ರದ ಹಣ ಬಿಡುಗಡೆ ಸಾಧ್ಯವಿಲ್ಲ ಎಂದರು.