ಬೆಂಗಳೂರು:ವಾಹನ ದಟ್ಟಣೆ ಇರುವ ಕರ್ನಾಟಕದ ರಾಜ್ಯ ಹೆದ್ದಾರಿಗಳನ್ನು ಉನ್ನತೀಕರಿಸುವಂತೆ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ದೆಹಲಿಯಲ್ಲಿಂದು ಗಡ್ಕರಿ ಅವರನ್ನು ಭೇಟಿ ಮಾಡಿದ ಅವರು, ಮೈಸೂರು ನಗರದ ಮಣಿಪಾಲ್ ಆಸ್ಪತ್ರೆ ಜಂಕ್ಷನ್ (ಕೊಲಂಬಿಯ ಏಷ್ಯಾ ಆಸ್ಪತ್ರೆ) ಫ್ಲೈಓವರ್ ನಿರ್ಮಾಣಕ್ಕೆ ಅನುಮೋದನೆ ನೀಡಿ, ಅಲ್ಲದೆ, ಮೈಸೂರು ರಿಂಗ್ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ-275ಕೆ ನಲ್ಲಿ 9 ಗ್ರೇಡ್ ಸೆಪರೇಟರ್ಗಳ ನಿರ್ಮಾಣಕ್ಕೆ ಅನುಮೋದನೆ ದೊರಕಿಸುವಂತೆ ಕೋರಿದ್ದಾರೆ.
ಮೈಸೂರಿನಿಂದ ಬನ್ನೂರು ಹೆದ್ದಾರಿ
ಈಗಾಗಲೇ ತಾತ್ವಿಕ ಅನುಮೋದನೆ ದೊರೆತಿರುವ ಕೇರಳದ ಕಲ್ಪೆಟ್ಟದಿಂದ ಮಾನಂದವಾಡಿ, ಹೆಚ್.ಡಿ.ಕೋಟೆ, ಜಯಪುರ ಮೂಲಕ ಮೈಸೂರು ಸಂಪರ್ಕಿಸುವ 90 ಕಿ.ಮೀ. ಹೆದ್ದಾರಿ, ಮೈಸೂರಿನಿಂದ ಬನ್ನೂರು ಮೂಲಕ ಮಳವಳ್ಳಿ ಸಂಪರ್ಕಿಸುವ 45 ಕಿ.ಮೀ. ಹೆದ್ದಾರಿ ಹಾಗೂ ಬೆಳಗಾವಿ ಜಿಲ್ಲೆಯ ಸಂಕೇಶ್ವರದಿಂದ ಗೋಕಾಕ-ಯರಗಟ್ಟಿ-ಮನ್ವಳ್ಳಿ ಮೂಲಕ ನರಗುಂದ ಸಂಪರ್ಕಿಸುವ 127 ಕಿ.ಮೀ. ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳಾಗಿ ಉನ್ನತೀಕರಿಸಲು ಮುಖ್ಯಮಂತ್ರಿ ಮನವಿ ಮಾಡಿದರು.
ರಾಷ್ಟ್ರೀಯ ಹೆದ್ದಾರಿ-766, ಕೊಳ್ಳೆಗಾಲ-ಕ್ಯಾಲಿಕಟ್ ನಡುವಿನ 106ಕಿ.ಮೀ. ರಸ್ತೆಯನ್ನು ಚತುಷ್ಪಥ ಮತ್ತು ಆರು ಪಥದ ಹೆದ್ದಾರಿಯಾಗಿ ಅಭಿವೃದ್ಧಿ ಪಡಿಸುವುದು.
ಬೆಳಗಾವಿ ನಗರದಲ್ಲಿ ಹಳೆ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಮೇಲುಸೇತುವೆ ನಿರ್ಮಾಣಕ್ಕೆ ಅನುಮೋದನೆ, ಬೆಳಗಾವಿ ಜಿಲ್ಲೆಯ ಗೋಕಾಕ್ ಜಲಪಾತದಲ್ಲಿ ಕೇಬಲ್ ಕಾರ್ ಸೌಲಭ್ಯ ಕಲ್ಪಿಸುವ ಯೋಜನೆ, ಕಿತ್ತೂರು ಪಟ್ಟಣದಿಂದ ಬೈಲಹೊಂಗಲ ಸಂಪರ್ಕಿಸುವ ರಸ್ತೆಯ ಸುಧಾರಣೆ.
ಕಲಬುರಗಿ, ರಾಯಚೂರು ಬೈಪಾಸ್
ಕಲಬುರಗಿ ಮತ್ತು ರಾಯಚೂರಿನಲ್ಲಿ ಬೈಪಾಸ್ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ-373ರ ಬೇಲೂರು-ಚಿಕ್ಕಮಗಳೂರು ವಿಭಾಗದಲ್ಲಿ ಚತುಷ್ಪಥ ನಿರ್ಮಾಣ, ಚಳ್ಳಕೆರೆ ಪಟ್ಟಣ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ-150ಎ ಒಂದು ಬಾರಿಗೆ ಸುಧಾರಣೆ.
ಬೆಳಗಾವಿ, ಹುನಗುಂದ-ರಾಯಚೂರು (ರಾಷ್ಟ್ರೀಯ ಹೆದ್ದಾರಿ 748ಎ), ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ಹೆದ್ದಾರಿ, ಸೂರತ್-ಚೆನ್ನೈ ಎಕ್ಸ್ಪ್ರೆಸ್ ಹೆದ್ದಾರಿ, ಬೆಂಗಳೂರು ನಗರದ ಉಪನಗರ ವರ್ತುಲ ರಸ್ತೆ, ಗ್ರೀನ್ಫೀಲ್ಡ್ ಕಾರಿಡಾರ್ಗಳ ಅಭಿವೃದ್ಧಿಗೆ ಅನುಮೋದನೆ ನೀಡಿರುವುದಕ್ಕೆ ಕೇಂದ್ರಕ್ಕೆ ಮುಖ್ಯಮಂತ್ರಿ ಕೃತಜ್ಞತೆ ಸಲ್ಲಿಸಿದರು.
ಇನ್ನಷ್ಟು ಪ್ರಮುಖ ವಿಚಾರಗಳ ಕುರಿತು ಕೇಂದ್ರ ಸಚಿವರ ಗಮನ ಸೆಳೆದರಲ್ಲದೆ, ರಾಜ್ಯದಲ್ಲಿ 5225ಕಿ.ಮೀ. ಉದ್ದದ 39 ತಾತ್ವಿಕ ಅನುಮೋದನೆ ದೊರಕಿದ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸುವ ಪ್ರಕ್ರಿಯೆ ಬಾಕಿ ಇದ್ದು, ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಅವರು ಕೋರಿದರು.