ನವದೆಹಲಿ:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ಕರ್ನಾಟಕ ಪೊಲೀಸ್ ಪಡೆ ಬಲವರ್ಧನೆಗೆ ಸಂಬಂಧಿಸಿದ ಪ್ರಸ್ತಾವನೆಗಳ ಮಂಜೂರಾತಿಗೆ ಮನವಿ ಮಾಡಿದರು.
ಕಾನೂನು-ಸುವ್ಯವಸ್ಥೆ ಮತ್ತು ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಲ್ಲಿ ಕೇಂದ್ರ ನೆರವಿನ ಅಗತ್ಯವಿದೆ.
ಭಾರತೀಯ ಮೀಸಲು ಪಡೆ ಬೆಟಾಲಿಯನ್
ಭಾರತ ಸರ್ಕಾರ 80 ಕೋಟಿ ರೂ. ವೆಚ್ಚದಲ್ಲಿ ಭಾರತೀಯ ಮೀಸಲು ಪಡೆ ಸ್ಥಾಪನೆಗೆ ಮುಂದಾಗಿದೆ, ಇದರಲ್ಲಿ ಬಳ್ಳಾರಿ ಮತ್ತು ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿ ಹೆಚ್ಚುವರಿ ಎರಡು ಬೆಟಾಲಿಯನ್ ಸ್ಥಾಪನೆಗೆ ಅನುಮೋದನೆ ನೀಡುವಂತೆ ಕೋರಿದರು.
ನಿರ್ಭಯಾ ನಿಧಿಯಡಿ ಬೆಂಗಳೂರಿನಂತೆ ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರು ಹಾಗೂ ಕಲಬುರಗಿಯಲ್ಲೂ ಸೇಫ್ ಸಿಟಿ ಯೋಜನೆಗೆ ತಲಾ 200 ಕೋಟಿ ರೂ.ನಂತೆ ಒಟ್ಟು 1000 ಕೋಟಿ ರೂ. ವೆಚ್ಚಕ್ಕೆ ಅನುಮತಿ ನೀಡಬೇಕು.
ಹೈಕೋರ್ಟ್ ಆದೇಶದನ್ವಯ ಬಂಧಿಸುವ ಅಧಿಕಾರ ಹೊಂದಿರುವ ಸಿಬ್ಬಂದಿಗೆ ಸಮವಸ್ತ್ರದಲ್ಲಿ ಕ್ಯಾಮೆರಾ ಹೊಂದಿರುವುದು ಕಡ್ಡಾಯವಾಗಿದ್ದು, ಕರ್ನಾಟಕಕ್ಕೆ ಇನ್ನೂ 175 ಕೋಟಿ ರೂ. ವೆಚ್ಚದಲ್ಲಿ 58,546 ಕ್ಯಾಮೆರಾ ಒಳಗೊಂಡ ಸಮವಸ್ತ್ರಗಳ ಅಗತ್ಯವಿದ್ದು, 100 ಕೋಟಿ ರೂ. ನೆರವು ನೀಡುವಂತೆ ಮನವಿ ಸಲ್ಲಿಸಲಾಯಿತು.
ಹೊಸ ಕಟ್ಟಡ ನಿರ್ಮಾಣ
ಬಾಡಿಗೆ ಕಟ್ಟಡದಲ್ಲಿರುವ ಹಾಗೂ ಶಿಥಿಲಾವಸ್ಥೆಯಲ್ಲಿರುವ 100 ಪೊಲೀಸ್ ಠಾಣೆಗಳಿಗೆ ಪ್ರಸಕ್ತ ಸಾಲಿನಲ್ಲಿ ತಲಾ 3 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಉದ್ದೇಶಿಸಲಾಗಿದ್ದು, ಇದಕ್ಕಾಗಿ 300 ಕೋಟಿ ರೂ. ನೆರವು ಒದಗಿಸುವಂತೆ ಗೃಹ ಸಚಿವ ಅಮಿತ್ ಷಾ ಅವರನ್ನು ಕೋರಲಾಯಿತು.
ಪೊಲೀಸ್ ಕ್ಯಾಂಟೀನ್ ಮಾದರಿಯಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಸಿಬ್ಬಂದಿಗೂ ಕ್ಯಾಂಟೀನ್ ಸ್ಥಾಪನೆಗೆ ಅಗತ್ಯ ಅನುಮತಿ, ಪೊಲೀಸ್ ವಸತಿ ಗೃಹಗಳ ನಿರ್ಮಾಣ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯಗಳ ಆಧುನೀಕರಣಕ್ಕೆ ನೆರವು ಕುರಿತು ಚರ್ಚಿಸಲಾಯಿತು.