ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕಾಗಿ ಜಾತಿಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನಸಭೆಯಲ್ಲಿನ ಪ್ರತಿಪಕ್ಷ ನಾಯಕ ಆರ್.ಅಶೋಕ್ ಗುರುತರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸ್ಥಾನಕ್ಕೆ ಕಚ್ಚಾಟ ನಡೆಯುತ್ತಿದ್ದು, ಅಭಿವೃದ್ಧಿ ಕೆಲಸಕ್ಕೆ ಯಾರೂ ಮುಂದಾಗುತ್ತಿಲ್ಲ ಎಂದರು.
ಅಭಿವೃದ್ಧಿ ಕೆಲಸ ಆಗುತ್ತಿಲ್ಲ
ಮುಖ್ಯಮಂತ್ರಿ ಸ್ಥಾನ ಕುರಿತು ಕಾಂಗ್ರೆಸ್ ಪಕ್ಷದೊಳಗೆ ಒಡಕು ಉಂಟಾಗಿದೆ, ಈ ಬಗ್ಗೆ ಒಕ್ಕಲಿಗ ಸ್ವಾಮೀಜಿಯೂ ಮಾತನಾಡಿದ್ದಾರೆ, ಮುಖ್ಯಮಂತ್ರಿ ಬದಲಾವಣೆ ಹಾಗೂ ಮೂವರನ್ನು ಉಪಮುಖ್ಯಮಂತ್ರಿ ಮಾಡುವಲ್ಲಿ ಎಲ್ಲರೂ ಮುಳುಗಿದ್ದು, ಅಭಿವೃದ್ಧಿ ಕೆಲಸಗಳೇ ಆಗುತ್ತಿಲ್ಲ.
ಈ ಸರ್ಕಾರಕ್ಕೆ ಕುಡಿಯುವ ನೀರು ಕೊಡುವ ಯೋಗ್ಯತೆಯೂ ಇಲ್ಲವಾಗಿದೆ, ಜನರು ಕಲುಷಿತ ನೀರು ಸೇವಿಸಿ ಸಾಯುತ್ತಿದ್ದಾರೆ, ಡೆಂಘೀ ಸೋಂಕು ಹರಡಿ ಜನರು ತೊಂದರೆಗೊಳಗಾಗಿದ್ದರೂ ಸೂಕ್ತ ಕ್ರಮ ವಹಿಸಿಲ್ಲ ಎಂದು ಟೀಕಿಸಿದರು.
ಈಗ ಒಕ್ಕಲಿಗರು ಹಾಗೂ ಲಿಂಗಾಯತರು ಮಾತನಾಡುತ್ತಿದ್ದಾರೆ, ಮುಂದೆ ಕುರುಬ ಸಮುದಾಯದವರು ಮಾತನಾಡುತ್ತಾರೆ, ಜಾತಿಗಳ ನಡುವೆ ಕಾಂಗ್ರೆಸ್ ಕಚ್ಚಾಟ ಹುಟ್ಟುಹಾಕಿರುವುದು ಒಳ್ಳೆಯದಲ್ಲ.
ತೆರಿಗೆ ಏರಿಕೆಯಿಂದ ಜನರ ದರೋಡೆ
ಒಂದು ಕುಟುಂಬಕ್ಕೆ 2,000 ರೂ. ನೀಡುತ್ತೇವೆಂದು ಹೇಳಿದ ಕಾಂಗ್ರೆಸ್, ಬದಲಿಗೆ ತೆರಿಗೆ ಏರಿಕೆ ಮೂಲಕ 8 ರಿಂದ 10 ಸಾವಿರ ರೂ.ವರೆಗೆ ಜನರಿಂದ ದರೋಡೆ ಮಾಡುತ್ತಿದೆ, ಕಳೆದ ವರ್ಷ ಹಾಲಿನ ದರ 3 ರೂ. ಹೆಚ್ಚಿಸಿ, ಈಗ 2 ರೂ. ಹೆಚ್ಚಿಸಿದ್ದಾರೆ, ಪೆಟ್ರೋಲ್, ಡೀಸೆಲ್ ದರವನ್ನು ನಿರ್ದಾಕ್ಷಿಣ್ಯವಾಗಿ ಏರಿಸಿದ್ದರಿಂದ ಎಲ್ಲ ಅಗತ್ಯ ಸಾಮಗ್ರಿಗಳ ಬೆಲೆಗಳು ಏರಿಕೆಯಾಗಿವೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ ನಂತರ ಬಸ್ ಪ್ರಯಾಣ ದರ ಹೆಚ್ಚಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ, ಸಾರಿಗೆ ನಿಗಮಗಳಿಗೆ ಶಕ್ತಿ ಯೋಜನೆಯ ಬಾಕಿ ಹಣ ಇನ್ನೂ ಉಳಿಸಿಕೊಳ್ಳಲಾಗಿದೆ, ಹಾಲಿನ ಪೋತ್ಸಾಹಧನವೂ ಬಾಕಿ ಇದೆ, ಮದ್ಯದ ದರವನ್ನು ಜುಲೈನಿಂದ ಏರಿಸಲಾಗುತ್ತಿದೆ.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಚೊಂಬು ನೀಡುತ್ತಿದೆ ಎಂದು ಕಾಂಗ್ರೆಸ್ ಪ್ರದರ್ಶನ ಮಾಡಿತ್ತು, ಆದರೆ, ವಾಸ್ತವದಲ್ಲಿ ಕಾಂಗ್ರೆಸ್ ಸರ್ಕಾರವೇ ಜನರಿಗೆ ಚೊಂಬು ನೀಡುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಟಾಚಾರಕ್ಕೆ ಸಂಸದರ ಸಭೆ ಕರೆದು ಮಾತನಾಡಿದ್ದಾರೆ, ಕೇಂದ್ರ ಸರ್ಕಾರ ಯಾವುದೇ ಯೋಜನೆಗೆ ಅನುದಾನ ನೀಡಬೇಕಾದರೆ, ಅದಕ್ಕೆ ಸರಿಸಮನಾದ ಪಾಲನ್ನು ರಾಜ್ಯ ಸರ್ಕಾರ ನೀಡಬೇಕು, ಅದಕ್ಕೂ ಇವರ ಬಳಿ ಹಣವಿಲ್ಲದೆ ಕೇಂದ್ರ ಸರ್ಕಾರದ ಮೇಲೆ ದ್ವೇಷದ ಕಿಡಿ ಕಾರುತ್ತಿದ್ದಾರೆ, ರಾಜ್ಯದ ಆರ್ಥಿಕ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.