ಮಧುಸೂಧನ್ ಮಿಸ್ತ್ರಿ ಸಮಿತಿ ವರದಿ ನಂತರ ಸರ್ಕಾರ ಮತ್ತು ಪಕ್ಷದಲ್ಲಿ ಕೆಲವು ರಾಜಕೀಯ ನಿರ್ಧಾರ
ಬೆಂಗಳೂರು : ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಗಾದಿಯಿಂದ ಕೆಳಗಿಳಿಯುವ ಇಂಗಿತವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವರಿಷ್ಠರ ಮುಂದೆ ವ್ಯಕ್ತಪಡಿಸಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.
ಕೇಂದ್ರದ ಮುಂದಿರುವ ರಾಜ್ಯದ ಬಾಕಿ ಯೋಜನೆಗಳ ಅನುಷ್ಠಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೂಡಿ ಶಿವಕುಮಾರ್ ಕಳೆದ ವಾರ ದೆಹಲಿಯಲ್ಲಿ ಮೂರು ದಿನಗಳ ಕಾಲ ಬಿಡಾರ ಹೂಡಿದ್ದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಪ್ರತ್ಯೇಕವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ, ಸರ್ಕಾರ ಮತ್ತು ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದಾರೆ.
ನಾಯಕತ್ವ ಬದಲಾವಣೆ ಹಾಗೂ ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಸೃಷ್ಠಿಗೆ ಸಂಬಂಧಿಸಿದಂತೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ಎದ್ದಿರುವ ಬೇಡಿಕೆಗಳ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.
ಮುಖ್ಯಮಂತ್ರಿ ಅವರು, ದೆಹಲಿಯಿಂದ ಹಿಂದಿರುಗಿದ ನಂತರ ಶಿವಕುಮಾರ್ ಅವರು ಖರ್ಗೆ ಅವರನ್ನು ಭೇಟಿ ಮಾಡಿ, ಕೆಲವು ಸಚಿವರ ಬಹಿರಂಗ ಹೇಳಿಕೆ, ಅದಕ್ಕೆ ಪ್ರತಿಯಾಗಿ ಪಕ್ಷದ ಶಾಸಕರು ನೀಡುತ್ತಿರುವ ಹೇಳಿಕೆಗಳನ್ನೂ ಅವರ ಗಮನಕ್ಕೆ ತಂದಿದ್ದಾರೆ.
ಇಂತಹ ಹೇಳಿಕೆಗಳಿಂದ ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಮುಜುಗರವಾಗಿದೆ ಎಂದಿದ್ದಲ್ಲದೆ, ರಾಜ್ಯದಲ್ಲಿ ಜರುಗುತ್ತಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸಂಬಂಧಿಸಿದಂತೆಯೂ ಸಮಾಲೋಚನೆ ಮಾಡಿದ್ದಾರೆ.
ಮಾತುಕತೆ ಸಂದರ್ಭದಲ್ಲೇ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ವೇಳೆ ನಡೆದ ಒಪ್ಪಂದದಂತೆ ನಡೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ ಮುಗಿಯುವವರೆಗೂ ಉಪಮುಖ್ಯಮಂತ್ರಿ ಹುದ್ದೆ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಗಾದಿಯಲ್ಲೂ ಶಿವಕುಮಾರ್ ಮುಂದುವರೆಯಲಿದ್ದಾರೆ ಎಂದು ಅಂದು ಎಐಸಿಸಿ ಪ್ರಕಟಿಸಿತ್ತು.
ಚುನಾವಣೆ ಮುಗಿಯುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷರ ಗಾದಿ ಬದಲಾವಣೆಗೆ ಸಿದ್ದರಾಮಯ್ಯ ಬಣಕ್ಕೆ ಸೇರಿದ ಕೆಲವು ಸಚಿವರು ಮತ್ತು ಶಾಸಕರು ಪ್ರತ್ಯಕ್ಷ ಇಲ್ಲವೇ ಪರೋಕ್ಷವಾಗಿ ಒತ್ತಡ ಹೇರುತ್ತಿದ್ದಾರೆ.
ಮತ್ತೊಂದೆಡೆ ಮುಖ್ಯಮಂತ್ರಿ ಅವರು ರಾಹುಲ್ ಗಾಂಧಿ ಭೇಟಿ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಬಂದಿರುವ ಒತ್ತಡ ಹಾಗೂ ಸಂಪುಟದ ಕೆಲವು ಸಚಿವರ ಖಾತೆ ಬದಲಾವಣೆ ಬಗ್ಗೆ ತಮ್ಮ ನಾಯಕರ ಮುಂದಿಟ್ಟಿದ್ದರು.
ಇದಕ್ಕೆ ಸಂಬಂಧಿಸಿದಂತೆ ಮತ್ತಷ್ಟು ವಿವರಣೆ ಪಡೆದ ರಾಹುಲ್ ಗಾಂಧಿ, ಕರ್ನಾಟಕದಲ್ಲಿ ನಾವು ನಿರೀಕ್ಷಿಸಿದ ಫಲಿತಾಂಶ ಲೋಕಸಭಾ ಚುಣಾವಣೆಯಲ್ಲಿ ಬಂದಿಲ್ಲ ಎಂದು ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೀಟು ಹಂಚಿಕೆಯಲ್ಲಿ ನಾವು ಕರ್ನಾಟಕದ ಸಚಿವರು ಮತ್ತು ಮುಖಂಡರುಗಳಿಗೇ ಬಿಟ್ಟುಕೊಟ್ಟಿದ್ದೆವು. ಆದರೂ ಈ ಫಲಿತಾಂಶ ನಿರೀಕ್ಷಿಸಿರಲಿಲ್ಲ.
ಇಬ್ಬರು ಬಲಾಢ್ಯರು ನಾಯಕತ್ವ ವಹಿಸಿದ್ದರೂ ಎರಡಂಕಿ ದಾಟಿಲ್ಲ, ಸೋಲಿಗೆ ಕಾರಣ ಏನೆಂಬ ಬಗ್ಗೆ ಈಗಾಗಲೇ ನೇಮಕಗೊಂಡಿರುವ ಮಧುಸೂಧನ್ ಮಿಸ್ತ್ರಿ ನೇತೃತ್ವದ ಸಮಿತಿ ವರದಿ ಬರಲಿ ನಂತರ ಸರ್ಕಾರ ಮತ್ತು ಪಕ್ಷದಲ್ಲಿ ಕೆಲವು ರಾಜಕೀಯ ನಿರ್ಧಾರಗಳನ್ನು ಕೈಗೊಳ್ಳಲು ಪಕ್ಷ ನಿರ್ದೇಶನ ನೀಡಲಿದೆ ಎಂದು ಹೇಳಿ ಕಳುಹಿಸಿದ್ದಾರೆ.