ಬಿಜೆಪಿ ಅಧಿಕಾರಾವಧಿಯಲ್ಲಿ ನಿವೇಶನ ವಿತರಣೆ: ಸಿದ್ದರಾಮಯ್ಯ
ಬೆಂಗಳೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಹಗರಣದಲ್ಲಿ ನಮ್ಮ ಕುಟುಂಬದ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಅಧಿಕಾರಾವಧಿಯಲ್ಲಿ ನಿವೇಶನ ಹಂಚಿಕೆ ಆಗಿದೆ ಎಂದರು.
ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್, ಮುಖ್ಯಮಂತ್ರಿ ಅವರು ಮುಡಾ ಹಗರಣದಲ್ಲಿ ನಾಲ್ಕು ಸಾವಿರ ಕೋಟಿ ರೂ. ಗುಳುಂ ಮಾಡಿದ್ದು ತಮ್ಮ ಪತ್ನಿಯವರ ಹೆಸರಿನಲ್ಲೂ ವರ್ಗಾವಣೆ ನಿವೇಶನ ಪಡೆದಿದ್ದಾರೆ ಎಂದು ಗುರುತರ ಆರೋಪ ಮಾಡಿದ್ದರು.
ಅಶೋಕ್ ಈ ಸಂಬಂಧ ಟ್ವೀಟ್ ಮಾಡಿದ ಸ್ವಲ್ಪ ಸಮಯದಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಅವರು, ಈ ಹಗರಣ ಬಿಜೆಪಿ ಅವರ ಕಾಲದಲ್ಲೇ ಆಗಿದೆ.
ಪತ್ನಿ ಹೆಸರಿನಲ್ಲಿ ಮೂರು ಎಕರೆ 16 ಗುಂಟೆ
ಮೈಸೂರು ಹೊರವಲಯದ ವರ್ತುಲ ರಸ್ತೆ ಸಮೀಪದಲ್ಲೇ ನನ್ನ ಪತ್ನಿ ಪಾರ್ವತಿ ಹೆಸರಿನಲ್ಲಿ ಮೂರು ಎಕರೆ 16 ಗುಂಟೆ ಜಮೀನು ಇತ್ತು.
ಪ್ರಾಧಿಕಾರ ಹೊಸ ಬಡಾವಣೆ ನಿರ್ಮಾಣ ಸಂದರ್ಭದಲ್ಲಿ ನಮ್ಮ ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳದೆ, ನಿವೇಶನ ಮಾಡಿ ಮಾರಾಟ ಮಾಡಿದರು.
ನಮ್ಮ ಜಮೀನಿಗೆ ಸಮಾನಾಂತರವಾಗಿ ನಿವೇಶನಗಳನ್ನು ನೀಡುವುದಾಗಿ ಮುಡಾ ನಮಗೆ 50:50ರ ಅನುಪಾತದಲ್ಲಿ, ಅಂದರೆ 2021ರಲ್ಲಿ 14 ನಿವೇಶನಗಳನ್ನು ಹಂಚಿಕೆ ಮಾಡಿದೆ.
ಮುಡಾದಿಂದ ನಷ್ಟ, ಲಾಭವಾಗಿಲ್ಲ
ಈ ನಿವೇಶನಗಳ ಬಗ್ಗೆ ನಾನು ನಮ್ಮ ಆಸ್ತಿಯನ್ನು ಚುನಾವಣಾ ಸಂದರ್ಭದಲ್ಲಿ ಘೋಷಿಸಿಕೊಂಡಿದ್ದೇನೆ, ನಮಗೆ ಮುಡಾದಿಂದ ನಷ್ಟವಾಗಿದೆಯೇ ಹೊರತು ಲಾಭವಾಗಿಲ್ಲ.
ಈ ಜಮೀನನ್ನು ನನ್ನ ಪತ್ನಿಯ ಅವರ ಸಹೋದರ ಮಲ್ಲಿಕಾರ್ಜುನ ಅರಿಶಿನ-ಕುಂಕುಮ ರೂಪದಲ್ಲಿ ನನ್ನ ಪತ್ನಿಗೆ ದಾನವಾಗಿ ನೀಡಿದ್ದರು.
ಅವರ ಕುಟುಂಬದವರು ಆಸ್ತಿ ಹಂಚಿಕೊಳ್ಳುವ ಸಂದರ್ಭದಲ್ಲಿ ನನ್ನ ಪತ್ನಿಗೆ ಈ ಭೂಮಿ ನೀಡಿದ್ದರು.
ದಾನದ ರೂಪದಲ್ಲಿ ಬಂದಿದ್ದು
ನಾನು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಈ ಜಮೀನು ಖರೀದಿ ಮಾಡಿಲ್ಲ, ಅದು ದಾನದ ರೂಪದಲ್ಲಿ ಬಂದಿದ್ದು, ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದವರು ಇಲ್ಲ-ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
ನಿವೇಶನ ಅನುಪಾತದ ಹಂಚಿಕೆಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವರು ಮುಡಾದಲ್ಲಿ ಸಭೆ ನಡೆಸಿ, ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ, ಅದು ಶಿಕ್ಷೆಯಲ್ಲ, ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿಗಳಿಂದ ತನಿಖೆಗೆ ಆದೇಶ ಮಾಡಿದ್ದಾರೆ, ವರದಿ ಬರಲಿ ನಂತರ ಮುಂದಿನ ಕ್ರಮ ಎಂದರು.
ಜಮೀನು ಸ್ವಾಧೀನ
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ದೇವನೂರು ಬಡಾವಣೆ ನಿರ್ಮಾಣ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು.
ಸ್ವಾಧೀನ ಪಡಿಸಿಕೊಂಡ ಜಮೀನಿಗೆ ಪರಿಹಾರವಾಗಿ 71,457 ಚದರಡಿ ಜಾಗ ನೀಡಬೇಕಿತ್ತು, ಆದರೆ, 38,284 ಚದರಡಿ ಜಾಗ ಮಾತ್ರ ಕೊಟ್ಟಿದ್ದಾರೆ.
ಮುಡಾದವರು ಪಾರ್ವತಿ ಅವರಿಗೆ ಪುಕ್ಕಟೆಯಾಗಿ ಕೊಟ್ಟಿಲ್ಲ, ಅವರಿಗೆ ವಿಜಯನಗರ ಬಡಾವಣೆಯಲ್ಲಿ ಕೇವಲ 14 ನಿವೇಶನ ಕೊಟ್ಟಿದ್ದಾರೆ, ಇದು ಅವರಿಗೆ ನಷ್ಟವೇ ಆಗಿದೆ.
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ೨೦೨೧ರಲ್ಲಿ ಈ ನಿವೇಶನಗಳನ್ನು ಹಂಚಿಕೆ ಮಾಡಿದೆ, ಇದರಲ್ಲಿ ನಮ್ಮ ಸರ್ಕಾರದ ಪಾತ್ರವೇ ಇಲ್ಲ ಎಂದು ಸ್ಪಷ್ಟಪಡಿಸಿದರು.