ಡಿಸಿಎಂ- ಸಿಎಂ ನಡುವಿನ ಶೀಥಲ ಸಮರಕ್ಕೆ ತೆರೆ ಎಳೆಯಲು ಹೈಕಮಾಂಡ್ ಪ್ಲಾನ್
ಬೆಂಗಳೂರು : ನಾಯಕತ್ವಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಕಚ್ಚಾಟ ಶಮನ ಮಾಡಲು ಕಾಂಗ್ರೆಸ್ ವರಿಷ್ಠರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಕರ್ನಾಟಕ ರಾಜಕಾರಣಕ್ಕೆ ಇಳಿಸಲು ಸಿದ್ಧತೆ ನಡೆದಿದೆ.
ಕರ್ನಾಟಕ ಕಾಂಗ್ರೆಸ್ ಅನ್ನು ಆಪರೇಷನ್ ಕಮಲದಿಂದ ಪಾರು ಮಾಡುವುದು ಹಾಗೂ ಕೆಪಿಸಿಸಿಯಲ್ಲಿನ ಆಂತರಿಕ ಕಚ್ಚಾಟಕ್ಕೆ ತೆರೆ ಎಳೆಯಲು ಖರ್ಗೆ ಅವರನ್ನು ಸಿದ್ದರಾಮಯ್ಯ ನಂತರದ ಅವಧಿಗೆ ಮುಖ್ಯಮಂತ್ರಿಯನ್ನಾಗಿ ಮಾಡಲು ವರಿಷ್ಠರು ಮುಂದಾಗಿದ್ದಾರೆ.
ಇಂತಹ ಸಂದರ್ಭದಲ್ಲಿ ಶಿವಕುಮಾರ್ ಉಪ ಮುಖ್ಯಮಂತ್ರಿಯಾಗೇ ಮುಂದುವರೆಯುತ್ತಾರೆ. ಅವರ ಜೊತೆಗೆ ಎಂ.ಬಿ.ಪಾಟೀಲ್ ಅವರಿಗೂ ಸಚಿವ ಸ್ಥಾನದಿಂದ ಬಡ್ತಿ ದೊರೆಯಲಿದೆ.
ಅಧಿಕಾರದಿಂದ ಕೆಳಗಿಳಿಯುವ ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ಇಲ್ಲವೇ ರಾಷ್ಟ್ರ ರಾಜಕಾರಣಕ್ಕೆ ನಿಯೋಜಿಸಲಿದ್ದಾರೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ದಟ್ಟವಾಗಿ ಹಬ್ಬಿದೆ.
ಕಾಂಗ್ರೆಸ್ ಮೂಲ ಮಂತ್ರದಂತೆ ಒಬ್ಬ ವ್ಯಕ್ತಿಗೆ ಒಂದು ಹುದ್ದೆ. ಇದರನ್ವಯ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಸ್ಥಾನ ಇಲ್ಲವೆ ರಾಜ್ಯಸಭೆಯ ಪ್ರತಿಪಕ್ಷ ಸ್ಥಾನದಿಂದ ಕೆಳಗಿಳಿಯಬೇಕಾಗುತ್ತದೆ.
ಇಂದಿರಾ ಗಾಂಧಿ ಕುಟುಂಬಕ್ಕೆ ಅತ್ಯಂತ ನಿಷ್ಠರಾಗಿರುವ ಖರ್ಗೆ ಅವರನ್ನು ಒಂದು ಬಾರಿಯಾದರೂ ಮುಖ್ಯಮಂತ್ರಿ ಮಾಡಬೇಕೆಂದು ಪಕ್ಷದ ಅಧಿನಾಯಕರಾಗಿರುವ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಆಸಕ್ತಿ ಹೊಂದಿದ್ದಾರೆ.
ತಾವು ತೆಗೆದುಕೊಂಡ ನಿರ್ಧಾರವನ್ನು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರಿಗೆ ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಗಮನಕ್ಕೆ ತಂದಿದ್ದಾರೆ ಮತ್ತು ಖರ್ಗೆ ಅವರಿಗೆ ಒಮ್ಮೆ ಅವಕಾಶ ಮಾಡಿಕೊಡಿ ಎಂದು ಸಲಹೆ ಮಾಡಿದ್ದಾರೆ.
ಈ ಬೆಳವಣಿಗೆ ನಂತರ ಶಿವಕುಮಾರ್ ದೆಹಲಿಯಿಂದ ನಗರಕ್ಕೆ ಹಿಂತಿರುಗಿದವರು ಮತ್ತೆ ದೆಹಲಿಗೆ ತೆರಳಿ ಖರ್ಗೆ ಅವರನ್ನು ಭೇಟಿ ಮಾಡಿದ್ದು, ರಾಹುಲ್ ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.
ರಾಹುಲ್ ತೆಗೆದುಕೊಂಡಿರುವ ನಿರ್ಧಾರವನ್ನು ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಪ್ರಶ್ನೆ ಮಾಡುವುದಿಲ್ಲ. ಅವರ ಬಗ್ಗೆ ಮುಖ್ಯಮಂತ್ರಿ ಅವರಿಗೆ ಬಹಳ ಅಭಿಮಾನವಿದೆ.
ಎರಡು ಬಾರಿ ಮುಖ್ಯಮಂತ್ರಿ ಆಗುವುದರ ಜೊತೆಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕನಾಗಿ ಕೆಲಸ ಮಾಡಲು ರಾಹುಲ್ ಅವರೇ ಕಾರಣ ಎಂಬ ಗೌರವ ಸಿದ್ದರಾಮಯ್ಯ ಅವರಲ್ಲಿದೆ.
ಈ ಕಾರಣಕ್ಕಾಗಿ ರಾಹುಲ್ ಸೂತ್ರಕ್ಕೆ ಸಂಪೂರ್ಣ ಸಹಮತ ವ್ಯಕ್ತಪಡಿಸಿದ್ದಾರೆ. ಜೊತೆಗೆ ಒಬ್ಬ ದಲಿತ ನಾಯಕನಿಗೆ ಅಧಿಕಾರ ಬಿಟ್ಟುಕೊಟ್ಟೆ ಎಂಬ ಹೆಗ್ಗಳಿಕೆಗೂ ಪಾತ್ರರಾಗುತ್ತಾರೆ.
ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವುದರಿಂದ ಕಾಂಗ್ರೆಸ್ಗೆ ರಾಷ್ಟ್ರಮಟ್ಟದಲ್ಲಿ ದಲಿತ ನಾಯಕನೊಬ್ಬನನ್ನು ಮುಖ್ಯಮಂತ್ರಿ ಮಾಡಿದ ಕೀರ್ತಿ ಒಂದೆಡೆಯಾದರೆ, ಮತ್ತೊಂದೆಡೆ ಅವರ ಸರ್ಕಾರವನ್ನು ಉರುಳಿಸಲು ಪಕ್ಷದಲ್ಲಿ ಆಂತರಿಕವಾಗಿ ಇಲ್ಲವೇ ಬಾಹ್ಯವಾಗಿ ಯಾರೂ ಪ್ರಯತ್ನ ಮಾಡುವುದಿಲ್ಲ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪೂರ್ಣಾವಧಿಗೆ ಅಧಿಕಾರ ನಡೆಸಲಿದೆ ಎಂಬ ಎಲ್ಲಾ ಲೆಕ್ಕಾಚಾರದಿಂದ ಹಾಗೂ ಖರ್ಗೆ ಅವರಿಗೆ ಒಂದು ಅವಕಾಶ ನೀಡಲು ಸೋನಿಯಾ ಮತ್ತು ರಾಹುಲ್ ಈ ತೀರ್ಮಾನ ಕೈಗೊಂಡಿದ್ದಾರೆಂದು ಹೇಳಲಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಲೋಕಸಭಾ ಚುನಾವಣೆಯಲ್ಲಿ ಖರ್ಗೆ ಪ್ರತಿನಿಧಿಸುವ ಕಲ್ಯಾಣ ಕರ್ನಾಟಕದ ಐದೂ ಕ್ಷೇತ್ರಗಳು ಕಾಂಗ್ರೆಸ್ ಮಡಿಲಿಗೆ ಬಂದಿವೆ.
ಇದೂ ಕೂಡ ಅವರಿಗೆ ಕರ್ನಾಟಕದಲ್ಲಿ ಅಧಿಕಾರ ದೊರಕಿಸಲು ಕಾರಣಗಳಲ್ಲಿ ಒಂದಾಗಿದೆ ಎಂದು ಮೂಲಗಳು ತಿಳಿಸಿವೆ.