ಬೆಂಗಳೂರು:ಕೇಂದ್ರದ ಉಕ್ಕು ಹಾಗೂ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಮಂಡ್ಯದಲ್ಲಿ ಜನತಾ ದರ್ಶನ ಕಾರ್ಯಕ್ರಮ ಇದೇ ಶುಕ್ರವಾರ ಹಮ್ಮಿಕೊಂಡಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆಯ್ಕೆಗೊಂಡ ನಂತರ ಸಚಿವ ಸ್ಥಾನದ ಒತ್ತಡದಿಂದ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮತ್ತು ಜನರ ಸಂಪರ್ಕ ಮಾಡಲು ಸಾಧ್ಯವಾಗಿರಲಿಲ್ಲ.
ಮಂಡ್ಯ ಡಾ.ಅಂಬೇಡ್ಕರ್ ಭವನ
ಈ ಕಾರಣದಿಂದಲೇ ನಗರದ ಡಾ.ಅಂಬೇಡ್ಕರ್ ಭವನದ ಆವರಣದಲ್ಲಿ ರೈತರು ಮತ್ತು ಜನರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಕೊಡಲು ಈ ಜನತಾ ದರ್ಶನ ಹಮ್ಮಿಕೊಂಡಿದ್ದಾರೆ.
ಜನತಾ ದರ್ಶನ ಕಾರ್ಯಕ್ರಮ ನಡೆಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳುವಂತೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಅವರಿಗೆ ಪತ್ರ ರವಾನೆ ಮಾಡಿದ್ದಾರೆ.
ಜನತಾ ದರ್ಶನ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಇಲಾಖೆಗಳ ಮುಖ್ಯಸ್ಥರು ಇದ್ದು, ಜನರ ಸಮಸ್ಯೆಗೆ ಸ್ಥಳದಲ್ಲೇ ಸ್ಪಂದಿಸುವಂತೆ ಸೂಚಿಸಿದ್ದಾರೆ.
ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಸಂದರ್ಭದಲ್ಲೂ ಪ್ರತಿ ಶನಿವಾರ ಜನತಾ ದರ್ಶನ ನಡೆಸಿ ರಾಜ್ಯದ ಜನರ ಕಷ್ಟ-ಸುಖಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದರು.
ಅಷ್ಟೇ ಅಲ್ಲ ಗ್ರಾಮ ವಾಸ್ತವ್ಯ ಎಂಬ ಕಾರ್ಯಕ್ರಮದಡಿ ಯಾವುದಾದರೂ ಒಂದು ಗ್ರಾಮದಲ್ಲಿ ರಾತ್ರಿ ತಂಗಿ ಸ್ಥಳೀಯ ಸಮಸ್ಯೆಗಳ ಆಲಿಸುವ ಮತ್ತು ಪರಿಹಾರ ಕಂಡುಹಿಡಿಯುವಲ್ಲಿ ಮುಂದಾಗಿದ್ದರು.