ಬೆಂಗಳೂರು:ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಆಡಳಿತವನ್ನು ಮತ್ತಷ್ಟು ಸಕ್ರಿಯಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐಎಎಸ್, ಐಪಿಎಸ್, ಐಎಫ್‌ಎಸ್ ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಹಿರಿಯ ಅಧಿಕಾರಿಗಳ ವರ್ಗಾವರ್ಗಿಗೆ ಸಿದ್ಧತೆ ಮಾಡಲಾಗಿದೆ.
ಕಳೆದ ಎರಡು ದಿನಗಳಿಂದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಚಿವ ಬೈರತಿ ಸುರೇಶ್ ಸೇರಿದಂತೆ ತಮ್ಮ ಆಪ್ತ ಸಚಿವರ ಜೊತೆ ಸುದೀರ್ಘ ಚರ್ಚೆ ನಡೆಸಿ ವರ್ಗಾವಣೆ ಪಟ್ಟಿಗೆ ಹಸಿರು ನಿಶಾನೆ ತೋರಿದ್ದಾರೆ.
25 ಪೊಲೀಸ್ ಅಧಿಕಾರಿಗಳ ವರ್ಗಾ
ವರ್ಗಾವಣೆಯ ಮೊದಲ ಭಾಗವಾಗಿ ಒಂದೇ ಹಂತದಲ್ಲಿ 25 ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದ್ದು, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಂಡ್ಯ ಸೇರಿದಂತೆ ಕೆಲವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಮೈಸೂರು ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸೀಮಾ ಲತ್ಕರ್ ಅವರನ್ನು ಅಲ್ಲಿನ ಪೊಲೀಸ್ ಕಮೀಷನರ್ ಆಗಿ ನೇಮಕ ಮಾಡಲಾಗಿದೆ.
ಎನ್.ವಿಷ್ಣುವರ್ಧನ್ ಅವರನ್ನು ಮೈಸೂರಿಗೂ, ಮಲ್ಲಿಕಾರ್ಜುನ ಬಲದಂಡಿ ಅವರನ್ನು ಮಂಡ್ಯಕ್ಕೂ, ಡಾ.ಕವಿತಾ ಬಿ.ಟಿ. ಅವರನ್ನು ಚಾಮರಾಜನಗರಕ್ಕೂ, ಎಂ.ನಾರಾಯಣ್ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ಪೂರ್ವ ವಲಯ ಡಿಐಜಿ
ಅಲ್ಲದೆ, ಪ್ರದೀಪ್ ಕುಂಟಿ ಅವರನ್ನು ಬೀದರ್‌ಗೂ, ಎನ್.ಯತೀಶ್ ದಕ್ಷಿಣ ಕನ್ನಡಕ್ಕೆ, ಡಾ.ಶೋಭಾರಾಣಿ ಬಳ್ಳಾರಿಗೆ, ಬಿ.ನಿಖಿಲ್ ಅವರನ್ನು ಕೋಲಾರಕ್ಕೂ, ಬಿ.ರಮೇಶ್ ಅವರನ್ನು ಪೂರ್ವ ವಲಯ (ದಾವಣಗೆರೆ) ಡಿಐಜಿ ಆಗಿ ನೇಮಿಸಲಾಗಿದೆ.
ಕೇಂದ್ರ ಗುಪ್ತಚರ ವಿಭಾಗದಲ್ಲಿ ಐಜಿಪಿಯಾಗಿದ್ದ ಲಾಬೂ ರಾಮ್ ಅವರನ್ನು ಐಜಿಪಿ ಕೇಂದ್ರ ವಲಯಕ್ಕೆ ನಿಯೋಜಿಸಲಾಗಿದೆ, ಇವರ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ.ಬಿ.ಆರ್.ರವಿಕಾಂತೇ ಗೌಡ ಅವರನ್ನು ಐಜಿಪಿ ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.
ಇದೇ ರೀತಿ ಇನ್ನೂ ಹಲವು ಪೊಲೀಸ್ ಅಧಿಕಾರಿಗಳು ವರ್ಗಾವಣೆಗೊಂಡಿದ್ದಾರೆ.