ಬೆಂಗಳೂರು:ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬುತ್ತಿದೆ, ಅಸ್ಥಿರತೆ ಕಾಡುತ್ತಿದೆ, ಇನ್ನೆಷ್ಟು ದಿನ ಇರುತ್ತದೋ ಗೊತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಅಭಿಪ್ರಾಯಪಟ್ಟರು.
ಪಕ್ಷದ ವಿಶೇಷ ಕಾರ್ಯಕಾರಿಣಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಒಳಜಗಳ ಮಿತಿ ಮೀರಿದೆ, ಹಾದಿ ಬೀದಿ ರಂಪ ಮುಂದುವರೆದಿದೆ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಕೂಗು ಕೇಳಿಸುತ್ತಿದೆ ಎಂದರು.
ಕಾರ್ಯಕರ್ತರ ಪರಿಶ್ರಮ
ಪಕ್ಷದ ಕಾರ್ಯಕರ್ತರ ಪರಿಶ್ರಮ ಹಾಗೂ ಜನತೆಯ ಒಲವಿನಿಂದಾಗಿ ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ, ಇದು ಐತಿಹಾಸಿಕ ಗೆಲುವು.
ಪ್ರತಿಪಕ್ಷಗಳ ಒಕ್ಕೂಟ ದೇಶದ ಜನತೆಗೆ ಪೊಳ್ಳು ಭರವಸೆಗಳನ್ನು ನೀಡುವ ಮೂಲಕ ಅಧಿಕಾರ ಹಿಡಿಯಲು ಪ್ರಯತ್ನಿಸಿತು, ಪ್ರಜ್ಞಾವಂತ ಮತದಾರರು ಇಂತಹ ಷಡ್ಯಂತ್ರವನ್ನು ಬೆಂಬಲಿಸಲಿಲ್ಲ ಎಂದರು.
ರಾಜ್ಯ ಕಾಂಗ್ರೆಸ್ ಅಧಿಕಾರ ದರ್ಪ ಹಾಗೂ ದುರುಪಯೋಗದಿಂದ ಲೋಕಸಭಾ ಚುನಾವಣೆಯಲ್ಲಿ 18 ರಿಂದ 20 ಸ್ಥಾನ ಗೆಲ್ಲುವ ಭ್ರಮೆಯಲ್ಲಿತ್ತು, ಮತದಾರರು ಹಾಗೂ ಪಕ್ಷದ ಕಾರ್ಯಕರ್ತರು ಪಾಠ ಕಲಿಸಿದ್ದಾರೆ, ರಾಜ್ಯದಲ್ಲಿ ಎನ್‌ಡಿಎ 19 ಸ್ಥಾನಗಳನ್ನು ಗೆದ್ದಿದೆ, ಇದರ ಶ್ರೇಯಸ್ಸು ಕಾರ್ಯಕರ್ತರಿಗೆ ಸಲ್ಲುತ್ತದೆ.
142 ವಿಧಾನಸಭಾ ಕ್ಷೇತ್ರಗಳಲ್ಲಿ ಲೀಡ್
ಕಾಂಗ್ರೆಸ್‌ನ ಒಡೆದಾಳುವ ನೀತಿ, ತುಷ್ಟೀಕರಣ, ಫಟಾಪಟ್ ಸುಳ್ಳಿನ ಭರವಸೆಯನ್ನು ಜನರು ತಿರಸ್ಕರಿಸಿದ್ದಾರೆ, ಬಿಜೆಪಿ ಮತ ಪ್ರಮಾಣ ಹೆಚ್ಚಿದೆ, ಬಿಜೆಪಿ-ಜೆಡಿಎಸ್ ಮೈತ್ರಿಕೂಟ 142 ವಿಧಾನಸಭಾ ಕ್ಷೇತ್ರಗಳಲ್ಲಿ ಲೀಡ್ ಪಡೆದಿದೆ ಎಂದರು.
ಕಳೆದ ಒಂದು ವರ್ಷದ ಕಾಂಗ್ರೆಸ್ ಆಡಳಿತ ಜನರ ಆಶಶೋತ್ತರಗಳನ್ನು ನುಚ್ಚುನೂರು ಮಾಡಿದೆ, ಗ್ಯಾರಂಟಿಗಳ ಮೂಲಕ ಒಳಿತು ಮಾಡುವುದಾಗಿ, ಭ್ರಷ್ಟಾಚಾರರಹಿತ ಆಡಳಿತ ನೀಡುವುದಾಗಿ ಭರವಸೆ ಕೊಟ್ಟು, ಹಿಂದೆಂದೂ ಕಾಣದಂತಹ ಭ್ರಷ್ಟಾಚಾರ ಹಗರಣ ಬಹಿರಂಗವಾಗಿ ಮುಖವಾಡ ಕಳಚಿಬಿದ್ದಿದೆ.
ವಾಲ್ಮೀಕಿ ನಿಗಮದ ದಲಿತ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಭ್ರಷ್ಟಾಚಾರಕ್ಕೆ ಬಳಸಿದ್ದಾರೆ, ಮೈಸೂರಿನ ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಕುಟುಂಬದವರ ಹೆಸರು ಕೇಳಿಬರುತ್ತಿದೆ, ಇದು ಸುಮಾರು 3ರಿಂದ 4 ಸಾವಿರ ಕೋಟಿ ರೂ. ಹಗರಣವಾಗಿದೆ.
ಅಧಿವೇಶನದಲ್ಲಿ ಹೋರಾಟ
ಪೆಟ್ರೋಲ್, ಡೀಸೆಲ್, ಹಾಲಿನ ಬೆಲೆ ಸೇರಿದಂತೆ ಎಲ್ಲ ಅಗತ್ಯ ಸಾಮಗ್ರಿಗಳ ಬೆಲೆಗಳು ಏರಿಕೆಯಾಗಿವೆ, ಇಂತಹ ಸರ್ಕಾರದ ವಿರುದ್ಧ ವಿಧಾನಸಭಾ ಅಧಿವೇಶನದಲ್ಲಿ ಹೋರಾಟ ಮುಂದುವರೆಸುತ್ತೇವೆ ಎಂದರು.
ಪಕ್ಷದ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿ ಈಗ ವಿಧಾನಸಭಾ ಚುನಾವಣೆ ನಡೆದರೆ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಎಂದರು.
ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್‌ದಾಸ್ ಅಗರ್ವಾಲ್ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಐತಿಹಾಸಿಕ ಗೆಲುವಿಗೆ ಕಾರ್ಯಕರ್ತರ ಪ್ರಯತ್ನ, ಸಮರ್ಪಣಾ ಮನೋಭಾವ ಕಾರಣ, ಕಾಂಗ್ರೆಸ್‌ನ ಪರಾಜಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.