ಬೆಂಗಳೂರು:ನಗರದ ಚಾಮರಾಜಪೇಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಪಠ್ಯ ಪುಸ್ತಕಗಳು ಹಾಗೂ ಬಾತ್‌ರೂಂ ಕಿಟ್‌ಗಳ ಸಮರ್ಪಕ ವಿತರಣೆ, ಊಟದ ವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು.
ಬೆಳಗ್ಗೆ ದೋಸೆ, ಮಧ್ಯಾಹ್ನ ಊಟ, ಆಗಾಗ ಪುಲಾವ್ ಕೊಡುತ್ತಾರೆ, ಆರೋಗ್ಯ ತಪಾಸಣೆಗೆ ನಿಯಮಿತವಾಗಿ ವೈದ್ಯರು ಬರುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಖುಷಿಯಿಂದ ಹೇಳಿದರು.
ಮುಖ್ಯಮಂತ್ರಿಗಳು ವಿದ್ಯಾರ್ಥಿಗಳನ್ನುದ್ದೇಶಿಸಿ, ಪಠ್ಯಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳನ್ನು ಕೇಳಿದರು.
ವಿದ್ಯಾರ್ಥಿಗಳ ಉತ್ತರ
ಸಂದಿ ಎಂದರೇನು, ಸಂದಿಗಳಲ್ಲಿ ಎಷ್ಟು ವಿಧ, ಕನ್ನಡ ಅಕ್ಷರ ಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ, ಅವುಗಳಲ್ಲಿ ಯೋಗವಾಹಗಳು ಎಷ್ಟು, ಸ್ವರ ಎಂದರೇನು, ವ್ಯಂಜನಗಳು ಎಂದರೇನು, ಎಷ್ಟಿವೆ, ವರ್ಗೀಯ, ಅವರ್ಗೀಯ ವ್ಯಂಜನಗಳು ಎಷ್ಟಿವೆ, ಅಲ್ಪಪ್ರಾಣ, ಮಹಾಪ್ರಾಣ ಎಂದರೇನು, ಅಲ್ಪಪ್ರಾಣಕ್ಕೆ ಉದಾಹರಣೆ ನೀಡಿ ಎಂಬ ಪ್ರಶ್ನೆಗಳನ್ನು ಕೇಳಿದ ಮುಖ್ಯಮಂತ್ರಿಗಳು, ಮಕ್ಕಳ ಉತ್ತರಗಳನ್ನು ತಿದ್ದಿ ಹೇಳಿದರು.
ಮೊರಾರ್ಜಿ ದೇಸಾಯಿ ಶಾಲೆಗಳನ್ನು ರಾಜ್ಯದಲ್ಲಿ ಯಾರು, ಯಾವಾಗ ಆರಂಭಿಸಿದರು ಎಂಬ ಪ್ರಶ್ನೆಗೆ, ವಿದ್ಯಾರ್ಥಿಗಳು, ’ನೀವೇ’ ಎಂದು ಉತ್ತರಿಸಿದರು, ಆದರೆ, ಆರಂಭಿಸಿದ ಇಸವಿ ಗೊತ್ತಾಗದಿದ್ದಾಗ, ೯೪-೯೫ರಲ್ಲಿ ಎಂದು ಮುಖ್ಯಮಂತ್ರಿ ತಿದ್ದಿದರು.
ಬಸವಣ್ಣನವರು ಸಾಮಾಜಿಕ ಕ್ರಾಂತಿ ಮಾಡಿದ್ದು ಏಕೆ ಎಂಬ ಮುಖ್ಯಮಂತ್ರಿಗಳ ಪ್ರಶ್ನೆಗೆ, ಮನುಷ್ಯರ ನಡುವಿನ ತಾರತಮ್ಯ, ಜಾತಿ ವ್ಯವಸ್ಥೆ ವಿರೋಧಿಸಿ ಸಾಮಾಜಿಕ ಕ್ರಾಂತಿ ನಡೆಸಿದರು ಎಂದು ವಿದ್ಯಾರ್ಥಿಗಳು ಉತ್ತರಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಿಕ್ಷಕರು, ಕಳೆದ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ಎಲ್ಲರೂ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದು, ಒಬ್ಬ ವಿದ್ಯಾರ್ಥಿನಿ ಮಾತ್ರ ಸೆಕೆಂಡ್ ಬಂದಿದ್ದಾಗಿ ವಿವರಣೆ ನೀಡಿದರು.