ಬೆಂಗಳೂರು:ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಸಮಯದಾಯಕ್ಕೆ ಮೀಸಲಿಟ್ಟ ಹಣ ದುರುಪಯೋಗಪಡಿಸಿಕೊಂಡರೆ, ಇಲ್ಲವೇ, ಪರಿಶಿಷ್ಟರ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಎಚ್ಚರಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಳಣದಲ್ಲಿ ಅನುಸೂಚಿತ ಜಾತಿಗಳ ಉಪಹಂಚಿಕೆ ಮತ್ತು ಬುಡಕಟ್ಟು ಉಪಹಂಚಿಕೆ ರಾಜ್ಯ ಪರಿಷತ್ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ ಅವರು, ನಮ್ಮ ಹಿಂದಿನ ಸರ್ಕಾರ ಈ ಕಾಯ್ದೆಯನ್ನು 2013ರಲ್ಲೇ ಜಾರಿಗೆ ತಂದು ಒಟ್ಟಾರೆ ಶೇಕಡ 24.1ರಷ್ಟು ಈ ಸಮುದಾಯಗಳ ಅಭಿವೃದ್ಧಿಗೆ ವೆಚ್ಚ ಮಾಡಲಾಗುತ್ತಿದೆ.
ಅದೇ ವರ್ಷ ವೆಚ್ಚ ಮಾಡಬೇಕು
ಈ ಹಣವನ್ನು ಯಾವುದೇ ಕಾರಣಕ್ಕೂ ದುರ್ಬಳಕೆ ಮಾಡಬಾರದು, ನಿಗದಿ ಪಡಿಸಿದ ಮೊತ್ತವನ್ನು ಆಯಾ ಸಮುದಾಯದ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಬಳಸಬೇಕು ಮತ್ತು ಆ ಹಣವನ್ನು ಅದೇ ವರ್ಷ ವೆಚ್ಚ ಮಾಡಬೇಕು ಎಂದು ಕಟ್ಟಾದೇಶ ಮಾಡಿದರು.
ಶಾಸಕರು ಪಟ್ಟಿ ನೀಡಿಲ್ಲ ಎಂದು ಕೈಚೆಲ್ಲಿ ಕುಳಿತುಕೊಳ್ಳಬೇಡಿ, ನಿಗಮಗಳ ಅಧ್ಯಕ್ಷರು ಹಾಗೂ ಸಂಬಂಧಿಸಿದ ಸಚಿರು ಮತ್ತು ಶಾಸಕರ ಫಲಾನುಭವಿಗಳ ಪಟಟಿ ಒದಗಿಸುವಂತೆ ಮನವೊಲಿಸುವ ಕಾರ್ಯ ನಿಮ್ಮದು.
ಶೇ.65ರಷ್ಟು ಮಾತ್ರ ಉಪಯೋಗ
ನಾವು ಮಾಡಿರುವ ಮೌಲ್ಯಮಾಪನದ ಪ್ರಕಾರ ಶೇಕಡ 65ರಷ್ಟು ಮಾತ್ರ ಉಪಯೋಗವಾಗಿದೆ, ಪೂರ್ಣ ಹಣ ವೆಚ್ಚ ಮಾಡಲು ಸೆಕ್ಷನ್ 7 (ಡಿ) ಕೈಬಿಡಲಾಗಿದೆ, ಇದರಿಂದಾಗಿ ಯೋಜನೆಯ ಸಂಪೂರ್ಣ ವೆಚ್ಚ ಈ ಸಮುದಾಯದವರಿಗೇ ಬಳಕೆಯಾಗಬೇಕು ಎಂದರು.
ಇಡೀ ದೇಶದಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆ ಮಾಡಿರುವುದು ಕರ್ನಾಟಕ ಮಾತ್ರ, ಜನಸಂಖ್ಯೆಗೆ ಅನುಗುಣವಾಗಿ ಎಸ್‌ಸಿ-ಎಸ್‌ಟಿ ಸಮುದಾಯಕ್ಕೆ ಹಣ ಕೊಡುತ್ತಿರುವುದು ನಮ್ಮ ಸರ್ಕಾರ ಮಾತ್ರ.
2024-25ನೇ ಸಾಲಿನಲ್ಲಿ 39121.46 ಕೋಟಿ ರೂ. ಇದ್ದರೆ, ಹಿಂದಿನ ವರ್ಷ 35221.84 ಕೋಟಿ ರೂ. ಇತ್ತು. ಇದರಲ್ಲಿ ಬಿಡುಗಡೆ ವೆಚ್ಚದ ಶೇ. 99.64 ಕೋಟಿ ರೂ.ನಷ್ಟು ಖರ್ಚಾಗಿದೆ, ಉಳಿದದ್ದು ಏಕೆ ವೆಚ್ಚವಾಗಿಲ್ಲ ಎಂದು ಪ್ರಶ್ನಿಸಿದರು.
ವರ್ಷದ ಕ್ರಿಯಾ ಯೋಜನೆ
ಈ ವರ್ಷದ ಕ್ರಿಯಾ ಯೋಜನೆಯಲ್ಲಿ ಮುಖ್ಯವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 8,480 ಕೋಟಿ ರೂ., ಇಂಧನ ಇಲಾಖೆಗೆ 5,026 ಕೋಟಿ ರೂ., ಸಮಾಜ ಕಲ್ಯಾಣ ಇಲಾಖೆಗೆ 4,174 ಕೋಟಿ ರೂ., ಕಂದಾಯ ಇಲಾಖೆಗೆ 3,403 ಕೋಟಿ ರೂ., ಗ್ರಾಮೀಣಾಭಿವೃದ್ಧಿ ಇಲಾಖೆಗೆ 3,163 ಕೋಟಿ ರೂ. ಒದಗಿಸಲಾಗಿದೆ.
ಅನುದಾನ ಯಾವ ಕಾರಣಕ್ಕೂ ಬಳಕೆಯಾಗದೆ ಉಳಿಕೆ ಆಗಬಾರದು ಎಂದು ಕಟ್ಟುನಿಟ್ಟಿನ ಆದೇಶ ನೀಡಿದರು.