ಬೆಂಗಳೂರು:ಅಧಿಕಾರಿಗಳ ಉದಾಸೀನದಿಂದ ರಸ್ತೆ ಅಪಘಾತಗಳಲ್ಲಿ ಜನರ ಪ್ರಾಣ ಹೋದರೆ ಸಹಿಸುವುದಿಲ್ಲ, ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳು, ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಉಸ್ತುವಾರಿ ಕಾರ್ಯದರ್ಶಿಗಳ ಎರಡನೇ ದಿನದ ಸಭೆಯಲ್ಲಿ ಮಾತನಾಡಿದ ಅವರು, ಅಪಘಾತ ವಲಯ ಮತ್ತು ಬ್ಲಾಕ್‌ಸ್ಪಾಟ್ ಗುರುತಿಸಿ ಸುಮ್ಮನಾದರೆ ನಿಮ್ಮ ಜವಾಬ್ದಾರಿ ಮುಗಿಯುವುದಿಲ್ಲ, ರಸ್ತೆಗಳಿದು ಸುರಕ್ಷತೆ ಪರೀಕ್ಷಿಸಬೇಕು ಎಂದರು.
ಒಂದು ವರ್ಷದಲ್ಲಿ 9,943 ಜನರ ಸಾವು
ಕಳೆದ ಒಂದು ವರ್ಷದಲ್ಲಿ 34,916 ಅಪಘಾತಗಳು ಸಂಭವಿಸಿದ್ದು, 9,943 ಜನರು ಸಾವನ್ನಪ್ಪಿದ್ದಾರೆ, ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಗಳು ಅಪಘಾತ ಪ್ರಮಾಣ ತಡೆಯಲು ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಬೇಕು.
ಕಂದಾಯ, ಪೊಲೀಸ್, ಸಾರಿಗೆ, ನಗರಪಾಲಿಕೆ ಸಮನ್ವಯದಿಂದ ಕಾರ್ಯ ನಿರ್ವಹಿಸಿದರೆ ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯ.
ರಸ್ತೆ ಸುರಕ್ಷತಾ ಸಪ್ತಾಹಗಳು ಕಾಟಾಚಾರಕ್ಕೆ ನಡೆಯಬಾರದು, ಮುಂಜಾಗರೂಕತಾ ಕ್ರಮ ಕೈಗೊಂಡರೆ ಹಲವು ಅಪಘಾತಗಳನ್ನು ತಡೆಯಬಹುದಾಗಿದೆ, ಹಾಟ್‌ಸ್ಟಾಟ್‌ಗಳನ್ನು ಗುರುತಿಸಿ, ಹೆದ್ದಾರಿಗಳಲ್ಲಿ ಅಂಬ್ಯುಲೆನ್ಸ್, ಟ್ರಾಮಾ ಸೆಂಟರ್ ನೆಟ್‌ವರ್ಕ್ ವ್ಯವಸ್ಥೆ ಮಾಡಬೇಕು ಎಂದರು.