ಬೆಂಗಳೂರು:ಕಾನೂನಿನ ಮುಂದೆ ಉಳ್ಳವರು, ಬಡವರು, ಕೂಲಿಕಾರರು ಸಮಾನರು, ಕಾನೂನು ಪರಿಪಾಲನೆ ಮಾಡದಿದ್ದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಎಚ್ಚರಿಸಿದ್ದಾರೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಷ್ಟ್ರಪತಿಗಳ ಹಾಗೂ ಮುಖ್ಯಮಂತ್ರಿಗಳ ಪದಕ ಪ್ರದಾನ ಮತ್ತು ಸನ್ನಡತೆಯ ಆಧಾರದ ಮೇಲೆ ಕಾರಾಗೃಹ ನಿವಾಸಿಗಳ ಶಿಕ್ಷೆ ಅವಧಿಪೂರ್ವ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಕೃತಿಯ ನಿಯಮ ಅರ್ಥ ಮಾಡಿಕೊಂಡು ನಡೆದರೆ ಸಮಾಜ ಗುರುತಿಸುತ್ತದೆ ಎಂದರು.
ತಪ್ಪುಗಳನ್ನು ತಿದ್ದಿಕೊಳ್ಳಬೇಕು
ಕೆಲವು ಸಂದರ್ಭಗಳಲ್ಲಿ ತೆಗೆದುಕೊಳ್ಳುವ ತೀರ್ಮಾನದಿಂದ ಗೊತ್ತಿದ್ದೋ, ಗೊತ್ತಿಲ್ಲದೆಯೋ ತಪ್ಪುಗಳನ್ನು ಮಾಡಿರುತ್ತೇವೆ, ಅವನ್ನು ತಿದ್ದಿಕೊಳ್ಳಬೇಕು, ಪಶ್ಚಾತ್ತಾಪದ ಮೂಲಕ ಹೊಸ ಹಾದಿಯಲ್ಲಿ ಸಾಗಬೇಕು.
ತಪ್ಪನ್ನು ತಿದ್ದಿಕೊಳ್ಳುವವರಿಗೆ ಕಾನೂನಿನಲ್ಲಿ ಮತ್ತೊಂದು ಅವಕಾಶ ಕಲ್ಪಿಸಲಾಗಿದೆ, ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗುತ್ತದೆ, ಸನ್ನಡತೆಯಿಂದ ಪರಿವರ್ತನೆ ತಂದುಕೊಂಡರೆ ಸಮಾಜದಲ್ಲಿ ಬದುಕಲು ಮತ್ತೊಂದು ಅವಕಾಶ ಸಿಗುತ್ತದೆ ಎಂದರು.
ಜೀವನ ತುಂಬ ವೇಗವಾಗಿ ಸಾಗುತ್ತಿದೆ, ಯಾವುದೇ ಕಾರಣಕ್ಕೂ ಮತ್ತೊಂದು ತಪ್ಪು ಮಾಡಬೇಡಿ, ಕುಟುಂಬದವರ ಜೊತೆ ಉಳಿದ ಜೀವನ ಸಾಗಿಸಿ ಎಂದು ಕಿವಿಮಾತು ಹೇಳಿದರು.
15 ಸಾವಿರ ಕಾರಾಗೃಹ ನಿವಾಸಿಗಳು
ರಾಜ್ಯದ 54 ಕಾರಾಗೃಹಗಳಲ್ಲಿ 15 ಸಾವಿರಕ್ಕೂ ಹೆಚ್ಚು ಜನರಿದ್ದಾರೆ, ಎಲ್ಲರನ್ನು ಸುರಕ್ಷಿತವಾಗಿಡಬೇಕು, ಅಲ್ಲದೆ, ವಿವಿಧ ಕೌಶಲ ತರಬೇತಿ, ಶಿಕ್ಷಣ ಮೂಲಕ ಸುಧಾರಿಸಿ ಪರಿವರ್ತನೆ ತರುವ ಜವಾಬ್ದಾರಿ ಇಲಾಖೆಯದ್ದಾಗಿದೆ.
ಕಾರಾಗೃಹ ನಿವಾಸಿಗಳ ಸುಧಾರಣೆ ಕುರಿತು ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರು ಅನೇಕ ಪ್ರಸ್ತಾವನೆಗಳನ್ನು ಸರ್ಕಾರದ ಮುಂದಿಟ್ಟಿದ್ದು, ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಉತ್ತಮ ನಾಗರಿಕನಾಗುತ್ತೇನೆ
ಕಾರಾಗೃಹ ನಿವಾಸಿ ದಾನೇಶ್ ಮಾತನಾಡಿ, ಆಕಸ್ಮಿಕ ಘಟನೆಯಿಂದ ಜೈಲು ಸೇರಬೇಕಾಯಿತು, ಇಲ್ಲಿದ್ದುಕೊಂಡು ಬಿ.ಎ. ಪದವಿ ಪೂರ್ಣಗೊಳಿಸಿದ್ದು, ಸನ್ನಡತೆ ಆಧಾರದ ಮೇಲೆ ಬಿಡುಗಡೆ ಆಗುತ್ತಿರುವುದು ಪುನರ್ ಜನ್ಮವಾಗಿದೆ, ಮುಂದೆ ಉತ್ತಮ ನಾಗರಿಕನಾಗಿ ಜೀವನ ಸಾಗಿಸುತ್ತೇನೆ ಎಂದರು.
ಇನ್ನೊಬ್ಬ ನಿವಾಸಿ ಸತೀಶ್ ಆಚಾರ್ಯ ಮಾತನಾಡಿ, ಆಹಾರ ಮತ್ತು ಸ್ವಾತಂತ್ರ್ಯದ ಮಹತ್ವ ಏನೆಂಬುದು ಜೈಲು ವಾಸದಲ್ಲಿ ಗೊತ್ತಾಗಿದೆ, ಮುಂದಿನ ಜೀವನದ ಹೊಸ ಅಧ್ಯಾಯ ಆರಂಭವಾಗಿದೆ ಎಂದರು.
ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಕಾರಾಗೃಹ ಮತ್ತು ಸುಧಾರಣಾ ಇಲಾಖೆ ಹೆಚ್ಚುವರಿ ಪೊಲೀಸ್ ಮಹಾನಿರೀಕ್ಷಕ ಆನಂದ್ ರೆಡ್ಡಿ, ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಉಪಸ್ಥಿತರಿದ್ದರು.