ಬೆಂಗಳೂರು: ಪ್ರವಾಸೋದ್ಯಮ ಅಭಿವೃದ್ಧಿಗೆ ಜಿಲ್ಲಾಧಿಕಾರಿಗಳು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ ನಂತರ ಪ್ರತ್ಯೇಕ ನಿಯಮ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳು, ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಉಸ್ತುವಾರಿ ಕಾರ್ಯದರ್ಶಿಗಳ ಎರಡನೇ ದಿನದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಸೋದ್ಯಮ ಅತ್ಯಂತ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ, ಪ್ರವಾಸೀ ತಾಣಗಳಲ್ಲಿ ಉತ್ತಮ ಪಂಚತಾರಾ ಹೋಟೆಲ್‌ಗಳು ಇಲ್ಲ, ವಿದೇಶಿ ಪ್ರವಾಸಿಗರು ಉಳಿದುಕೊಳ್ಳಲು ಗುಣಮಟ್ಟದ ಹೋಟೆಲ್‌ಗಳ ಅಗತ್ಯವಿದೆ ಎಂದರು.
ಆರ್ಥಿಕ ಚಟುವಟಿಕೆಗೆ ವೇಗ
ಪ್ರವಾಸೋದ್ಯಮ ಅಭಿವೃದ್ಧಿಯಿಂದ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಚಟುವಟಿಕೆಗೆ ವೇಗ ದೊರೆಯುತ್ತದೆ, ಪ್ರವಾಸೋದ್ಯಮಕ್ಕೆ ಹೆಚ್ಚು ಅವಕಾಶ ಇರುವ ಕರ್ನಾಟಕದಲ್ಲಿ 320 ಕಿ.ಮೀ ಕರಾವಳಿ ಇದೆ, ಇದರ ಸಮರ್ಪಕ ಬಳಕೆಯಾಗಿಲ್ಲ, ಸಿಆರ್‌ಝೆಡ್ ಕಾಯ್ದೆಯಿಂದ ಅಭಿವೃದ್ಧಿಗೆ ಕೆಲವು ತೊಡಕುಗಳು ಎದುರಾಗಿದ್ದು, ಇದರ ಪರಿಹಾರಕ್ಕೆ ಪ್ರಯತ್ನಿಸಬೇಕು.
ಜಿಲ್ಲಾಧಿಕಾರಿಗಳು ಪ್ರವಾಸಿ ತಾಣಗಳ ಅಭಿವೃದ್ಧಿ ಸಾಧ್ಯತೆಗಳನ್ನು ಗುರುತಿಸಿ, ಖಾಸಗಿ ಸಹಭಾಗಿತ್ವದಲ್ಲಿ ಮಾತ್ರವಲ್ಲದೆ ಸರ್ಕಾರದಿಂದಲೂ ಮುಂದುವರೆಯಬೇಕು, ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಎಲ್ಲಾ ಅಂಶಗಳನ್ನು ಸೇರಿಸಲಾಗುವುದು ಹಾಗೂ ಪೂರಕ ಅನುದಾನ ಒದಗಿಸಲಾಗುವುದು ಎಂದರು.
ನೀಲ ನಕಾಶೆ ಸಿದ್ಧಪಡಿಸಬೇಕು
ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ನೀಲ ನಕಾಶೆ ಸಿದ್ಧಪಡಿಸಬೇಕು, ಪ್ರವಾಸೋದ್ಯಮಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಿದರೆ ಮಾತ್ರ ಬಂಡವಾಳ ಹೂಡಿಕೆದಾರರು ಮುಂದೆ ಬರುತ್ತಾರೆ.
ಕೆಲವೇ ಪ್ರವಾಸೋದ್ಯಮ ತಾಣಗಳಿಗೆ ಪ್ರಾಮುಖ್ಯತೆ ದೊರೆಯುತ್ತಿದೆ, ರಾಜ್ಯದಲ್ಲಿ 25 ಸಾವಿರ ಸ್ಮಾರಕಗಳಿವೆ, ಇವುಗಳಲ್ಲಿ ಸುಮಾರು 23 ಸಾವಿರ ಸ್ಮಾರಕಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ, ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ ಸೌಲಭ್ಯ ಕಾಯ್ದೆ 2015ನ್ನು ಸಮರ್ಪಕ ಅನುಷ್ಠಾನಕ್ಕೆ ತಂದರೆ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ ಸಾಧ್ಯವಿದೆ ಎಂದರು.
ಪ್ರವಾಸೀ ತಾಣಗಳ ಪುನರುಜ್ಜೀವನ
ಜಿಲ್ಲಾವಾರು ಪ್ರವಾಸೋದ್ಯಮ ತಾಣಗಳ ಸಮೀಕ್ಷೆ, ಸಂರಕ್ಷಣೆಗೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸಬೇಕು, ಮೂರು ತಿಂಗಳಲ್ಲಿ ಕಾರ್ಯ ಪೂರ್ಣಗೊಳಿಸಬೇಕು, ಪ್ರವಾಸೀ ತಾಣಗಳನ್ನು ಹಂತ ಹಂತವಾಗಿ ಪುನರುಜ್ಜೀವನಗೊಳಿಸಲು ಕ್ರಮ ಕೈಗೊಳ್ಳಬೇಕು.
ಜಿಲ್ಲಾ ಪ್ರವಾಸೋದ್ಯಮ ಕುರಿತ ಪುಸ್ತಕಗಳ ಬಿಡುಗಡೆ, ಸ್ಮಾರಕ ದತ್ತಿ ಕಾರ್ಯಕ್ರಮಗಳ ಜಾರಿ, ಸ್ಮಾರಕಗಳ ದತ್ತು ಹಾಗೂ ಸಂರಕ್ಷಣೆ ಕಾರ್ಯ ಆಗಬೇಕು.
ಕರಾವಳಿ ಹಾಗೂ ಮಲೆನಾಡು ಪ್ರದೇಶಕ್ಕೆ ಪ್ರತ್ಯೇಕ ಯೋಜನೆ ರೂಪಿಸಬೇಕಿದೆ, ಇದರಿಂದ ತೆರಿಗೆ ಸಂಗ್ರಹ ಹಾಗೂ ಸ್ಥಳೀಯರಿಗೆ ಉದ್ಯೋಗವಕಾಶ ಸೃಷ್ಠಿ ಸಾಧ್ಯ, ಕರಾವಳಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮುಂಬೈ ಹಾಗೂ ಕೊಲ್ಲಿ ರಾಷ್ಟ್ರಗಳಿಗೆ ಉದ್ಯೋಗ ಅರಸಿ ಹೋಗುವ ಪರಿಸ್ಥಿತಿ ಬದಲಾಗಬೇಕಿದೆ ಎಂದರು.
25 ಸಾವಿರ ಸ್ಮಾರಕಗಳ ಸಂರಕ್ಷಣೆ
ಸಚಿವ ಹೆಚ್.ಕೆ.ಪಾಟೀಲ್ ಮಾತನಾಡಿ, ರಾಜ್ಯದಲ್ಲಿನ 25 ಸಾವಿರ ಸ್ಮಾರಕಗಳ ಸಮೀಕ್ಷೆ, ಸಂರಕ್ಷಣೆ ಹಾಗೂ ಮಹತ್ವ ಅರಿತ ಗೈಡ್‌ಗಳ ನೇಮಕ, ಜಿಲ್ಲೆಗಳ ಉತ್ತಮ ಸಾಹಿತಿ, ಬರಹಗಾರರು, ಕಲಾವಿದರ ನೆರವು ಪಡೆದು 3 ತಿಂಗಳಲ್ಲಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ಪ್ರವಾಸೋದ್ಯಮ ಸಮಿತಿ ಮುಂದೆ ಸಲ್ಲಿಸಿ, ಮಾಸ್ಟರ್ ಪ್ಲಾನ್‌ಗೆ ಹಣಕಾಸು ಒದಗಿಸಲಾಗುವುದು ಎಂದರು.
ಮಧುಗಿರಿಯ ಏಕಶಿಲಾ ಬೆಟ್ಟ, ಕಪ್ಪತ್ತಗುಡ್ಡ ನಿಸರ್ಗ ಪ್ರದೇಶವನ್ನು ಪ್ರವಾಸೋದ್ಯಮ ಕ್ಷೇತ್ರವಾಗಿ ಇನ್ನಷ್ಟು ಅಭಿವೃದ್ಧಿ ಪಡಿಸಲು ಸಾಧ್ಯವಿದೆ, ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿದರೆ ರಾಜ್ಯದ ಪ್ರತೀ ಜಿಲ್ಲೆಗಳನ್ನೂ ಪ್ರವಾಸೋದ್ಯಮ ಜಿಲ್ಲೆಗಳನ್ನಾಗಿ ಮಾಡಬಹುದಾಗಿದೆ ಎಂಬ ಪ್ರಸ್ತಾವನೆ ಮುಂದಿಟ್ಟರು.
ಇದಕ್ಕೆ ಧ್ವನಿಗೂಡಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯದಲ್ಲಿ ವಿಸ್ತಾರವಾದ ಕರಾವಳಿ ಪ್ರದೇಶವಿದ್ದು ಪ್ರವಾಸೋದ್ಯಮ ಅಭಿವೃದ್ಧಿಗೆ ಹೇರಳ ಅವಕಾಶಗಳಿವೆ ಎಂದರು.