ಬೆಂಗಳೂರು:ಮಾಜಿ ಸಚಿವ, ಹಾಲಿ ಕಾಂಗ್ರೆಸ್ ಶಾಸಕರಾದ ಬಿ.ನಾಗೇಂದ್ರ ಹಾಗೂ ಬಸನಗೌಡ ದದ್ದಲ್ ಅವರನ್ನು ಯಾವುದೇ ಕ್ಷಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ ವಶಕ್ಕೆ ಪಡೆಯಲಿದೆ.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರ ಅವರ ಆಪ್ತ ಸಹಾಯಕ ಹರೀಶ್ ಅವರನ್ನು ಇಡಿ ಬಂಧಿಸಿದೆ.
ನಿವಾಸ, ಕಚೇರಿಗಳ ಮೇಲೆ ದಾಳಿ
ಅಷ್ಟೇ ಅಲ್ಲ, ಉಭಯ ಶಾಸಕರು ಮತ್ತು ಅವರ ಆಪ್ತರ ನಿವಾಸ, ಕಚೇರಿಗಳ ಮೇಲೆ ಮುಂಜಾನೆಯೇ ಬೆಂಗಳೂರು, ಬಳ್ಳಾರಿ, ಹೈದರಾಬಾದ್‌ನಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳನ್ನು ವಶ ಪಡಿಸಿಕೊಂಡಿದೆ.
ದಾಳಿ ಸಂದರ್ಭದಲ್ಲೇ ನಾಗೇಂದ್ರ ಹಾಗೂ ದದ್ದಲ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.
ನಿನ್ನೆಯಷ್ಟೇ ಎಸ್‌ಐಟಿ ತಂಡ ಈ ಇಬ್ಬರು ಶಾಸಕರನ್ನು ಇಡೀ ದಿನ ವಿಚಾರಣೆ ನಡೆಸಿ ಬಿಡುಗಡೆ ಮಾಡಿತ್ತು.
ಮಹತ್ತರ ದಾಖಲೆಗಳ ವಶ
ಇದರ ಬೆನ್ನಲ್ಲೇ ಇಡಿ ಇಂದು ದಾಳಿ ನಡೆಸಿ ಮಹತ್ತರ ದಾಖಲೆಗಳನ್ನು ವಶ ಪಡಿಸಿಕೊಂಡಿರುವುದಲ್ಲದೆ, ಯಾವುದೇ ಸಂದರ್ಭದಲ್ಲಿ ಇವರನ್ನು ವಶಕ್ಕೆ ಪಡೆಯಲಿದೆ.
ಬಳ್ಳಾರಿಯ ನೆಹರು ಕಾಲೋನಿಯಲ್ಲಿರುವ ನಾಗೇಂದ್ರ ಅವರ ನಿವಾಸ, ಬೆಂಗಳೂರಿನ ಡಾಲರ‍್ಸ್ ಕಾಲೋನಿಯಲ್ಲಿನ ಅವರ ಅಪಾರ್ಟ್‌ಮೆಂಟ್, ದದ್ದಲ್ ವಾಸಿಸುವ ನಗರದ ಯಲಹಂಕ ಮತ್ತು ಕೋರಮಂಗಲ ಮನೆ ಸೇರಿದಂತೆ 18 ಕಡೆ ಇಡಿ ದಾಳಿ ನಡೆಸಿತು.
ಇದಲ್ಲದೆ, ನಿಗಮದ ಎಂಡಿ ಜೆ.ಜೆ.ಪದ್ಮನಾಭ್, ಲೆಕ್ಕ ಪರಿಶೋಧಕ ಪರಶುರಾಮ್, ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್, ಸತ್ಯನಾರಾಯಣ ವರ್ಮ ಅವರ ಮನೆ, ಕಚೇರಿಗಳ ಮೇಲೂ ದಾಳಿ ನಡೆದಿದೆ.
187 ಕೋಟಿ ರೂ. ಅವ್ಯವಹಾರ
ನಿಮಗದಲ್ಲಿ 187 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ನಗರದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಿಬಿಐಗೆ ದೂರು ದಾಖಲಿಸಿತ್ತು.
ಬ್ಯಾಂಕ್ ಆಡಳಿತ ಮಂಡಳಿ ಪ್ರಕರಣವನ್ನು ಸಿಬಿಐಗೆ ವಹಿಸುತ್ತಿದ್ದಂತೆ ಎಚ್ಚೆತ್ತ ರಾಜ್ಯ ಸರ್ಕಾರ ಹಗರಣದ ತನಿಖೆಗೆ ಎಸ್‌ಐಟಿ ರಚನೆ ಮಾಡಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪ್ರಾಥಮಿಕ ವರದಿ ಸಂಗ್ರಹಿಸಿ, ಭಾರೀ ಪ್ರಮಾಣದಲ್ಲಿ ಹಣಕಾಸು ವಹಿವಾಟು ನಡೆದಿರುವುದರಿಂದ ಇದರ ತನಿಖೆಯನ್ನು ಇಡಿಗೆ ವಹಿಸಿತ್ತು.
ನಾಗೇಂದ್ರ ಕಳೆದ ತಿಂಗಳಷ್ಟೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಪ್ರಕರಣಕ್ಕೆ ಸಂಬಂಧಿಸಿದ ಪೂರಕ ದಾಖಲೆ ಸಂಗ್ರಹಿಸಿದ ಇಡಿ ಇಂದು ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಒಬ್ಬರನ್ನು ವಶಕ್ಕೆ ಪಡೆದಿದ್ದು, ಉಳಿದವರ ಬಂಧನಕ್ಕೆ ಕ್ಷಣಗಣನೆ ಆರಂಭವಾಗಿದೆ.