ಬೆಂಗಳೂರು:ಮೈಸೂರು-ಕನಕಪುರ ನಡುವೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಯಾಗುವ ಸಾಧ್ಯತೆ ಇದೆ.
ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಒತ್ತಡ ಹೆಚ್ಚಿರುವ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಭಾಗದಲ್ಲಿ ಇನ್ನೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬರಲಿದೆ.
ಐದಾರು ಸ್ಥಳ ಗುರುತಿಸಲಾಗಿದೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೂಲಸೌಕರ್ಯ ಮತ್ತು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಹೊಸ ವಿಮಾನ ನಿಲ್ದಾಣ ಸ್ಥಾಪನೆಗೆ ಐದಾರು ಸ್ಥಳಗಳನ್ನು ಗುರುತಿಸಲಾಗಿದೆ, ಹಾಲಿ ವಿಮಾನ ನಿಲ್ದಾಣಕ್ಕೆ 60 ರಿಂದ 70 ಕಿಲೋ ಮೀಟರ್ ದೂರದಲ್ಲಿ ಹೊಸ ವಿಮಾನ ನಿಲ್ದಾಣ ಸ್ಥಾಪಿಸಲು ಸರ್ಕಾರ ಮುಂದಾಗಿದೆ ಎಂದರು.
ಯಾವ ಸ್ಥಳ ಸೂಕ್ತ ಎಂಬ ಬಗ್ಗೆ ನಮಗೆ ಪ್ರಾಥಮಿಕ ವರದಿ ಸಿಕ್ಕಿದೆ, ಆದರೆ, ತಾಂತ್ರಿಕ ತಜ್ಞರನ್ನು ನೇಮಿಸಿ ಅವರಿಂದ ವರದಿ ಪಡೆದು ಚಾಲನೆ ನೀಡಲಾಗುವುದು.
ನಮ್ಮವರೇ ಕೇಂದ್ರದಲ್ಲಿ ಕೈಗಾರಿಕಾ ಸಚಿವರು ಇರುವುದರಿಂದ ಹೊಸ ವಿಮಾನ ನಿಲ್ದಾಣಕ್ಕೆ ತ್ವರಿತಗತಿಯಲ್ಲಿ ಅನುಮೋದನೆ ದೊರೆಯಬಹುದೆಂಬ ವಿಶ್ವಾಸ ವ್ಯಕ್ತಪಡಿಸಿದರು.
ಆನೇಕಲ್‌ನ ಜಿಗಣಿ, ಕನಕಪುರ, ಮೈಸೂರು ರಸ್ತೆ, ತುಮಕೂರು ಸೇರಿದಂತೆ ಹಲವು ಸ್ಥಳಗಳನ್ನು ಗುರುತಿಸಿದ್ದೇವೆ.
ರಸ್ತೆ, ರೈಲು, ಮೆಟ್ರೊ ಸಂಪರ್ಕ
ಪ್ರಯಾಣಿಕರು ಹೆಚ್ಚು ಎಲ್ಲಿ ಲಭಿಸುತ್ತಾರೆ ಎಂಬುದಲ್ಲದೆ, ರಸ್ತೆ, ರೈಲು ಮತ್ತು ಮೆಟ್ರೊ ರೈಲಿನ ಸಂಪರ್ಕ ಇರುವ ಪ್ರದೇಶವನ್ನು ಗುರುತಿಸಿ, ಅಲ್ಲಿ ವಿಮಾನ ನಿಲ್ದಾಣ ಸ್ಥಾಪಿಸುವ ಉದ್ದೇಶ ಸರ್ಕಾರದ್ದು ಎಂದರು.
ಜಪಾನ್ ಮತ್ತು ದಕ್ಷಿಣ ಕೊರಿಯಾಕ್ಕೆ ಎರಡು ವಾರಗಳ ತಮ್ಮ ಭೇಟಿಯಿಂದ 6,450 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ ಬದ್ಧತೆ ಪಡೆದುಕೊಳ್ಳಲಾಗಿದೆ, ಈ ಬದ್ಧತೆ ಹಾಗೂ ಒಪ್ಪಂದಗಳ ಫಲವಾಗಿ ರಾಜ್ಯದಲ್ಲಿ 1,000 ಉದ್ಯೋಗಾವಕಾಶ ಸೃಷ್ಟಿಯಾಗುವ ನಿರೀಕ್ಷೆಯಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಕರ್ನಾಟಕದ ನಿಯೋಗ ಅಲ್ಲಿನ ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳ ಮುಖ್ಯಸ್ಥರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗಾಗಿ (ಎಸ್‌ಎಂಇ) ಬಂಡವಾಳ ಹೂಡಿಕೆ ಪ್ರಾತ್ಯಕ್ಷಿಕೆಗಳನ್ನು ನಡೆಸಿತು, ತಯಾರಿಕಾ ವಲಯಕ್ಕೆ ರಾಜ್ಯದಲ್ಲಿ ಇರುವ ಉತ್ತೇಜಕರ ಪೂರಕ ಸೌಲಭ್ಯಗಳ ಮಾಹಿತಿ ವಿನಿಮಯ ಮಾಡಿಕೊಂಡಿತು.
ಇನ್ವೆಸ್ಟ್ ಕರ್ನಾಟಕ-2025
35 ಉದ್ಯಮಗಳ ಪ್ರಮುಖರನ್ನು ಭೇಟಿ ಮಾಡಿದ ನಿಯೋಗ, ಮುಂದಿನ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ, ಇನ್ವೆಸ್ಟ್ ಕರ್ನಾಟಕ 2025ರಲ್ಲಿ ಭಾಗವಹಿಸಲು ಟೋಕಿಯೊ ಮತ್ತು ಸೋಲ್‌ನಲ್ಲಿ ನಡೆದ ಪ್ರಾತ್ಯಕ್ಷಿಕೆಗಳಲ್ಲಿ 200ಕ್ಕೂ ಹೆಚ್ಚು ಕಂಪನಿಗಳಿಗೆ ಆಹ್ವಾನ ನೀಡಲಾಯಿತು ಎಂದರು.
ಜಪಾನ್‌ನಲ್ಲಿ ನಡೆದ ಸಭೆಗಳಲ್ಲಿ ರೆನೆಸಾಸ್ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್, ಟೊಯೊಟಾ ಮೋಟರ್ ಕಾರ್ಪೊರೇಷನ್, ಯಮಹಾ ಮೋಟರ್ ಕಂಪನಿ, ಸುಮಿಟೊಮೊ ಹೆವಿ ಇಂಡಸ್ಟ್ರೀಸ್, ಪ್ಯಾನಾಸೋನಿಕ್ ಎನರ್ಜಿ, ನಿಡೆಕ್ ಕಾರ್ಪೊರೇಷನ್, ನಿಸಾನ್ ಮೋಟರ್ ಕಾರ್ಪೊರೇಷನ್, ಬ್ರದರ್ ಇಂಡಸ್ಟ್ರೀಸ್, ಶಿಮಾಡ್ಜು ಕಾರ್ಪೊರೇಷನ್, ಹಿಟಾಚಿ ಮತ್ತಿತರ ಕಂಪನಿಗಳು ಪ್ರಮುಖವಾಗಿವೆ.
ದಕ್ಷಿಣ ಕೊರಿಯಾದಲ್ಲಿ ವ್ಯಾಪಾರ, ಕೈಗಾರಿಕೆ ಮತ್ತು ಇಂಧನ ಸಚಿವಾಲಯದ ಉಪಮಂತ್ರಿ, ಕೊರಿಯಾದ ಜಿಯೊಂಗಿ ಪ್ರಾಂತ್ಯದ ವೈಸ್ ಗವರ್ನರ್ ಮತ್ತು ಸೋಲ್ ಮೆಟ್ರೊಪಾಲಿಟನ್ ಸರ್ಕಾರದಲ್ಲಿ ಆರ್ಥಿಕ ನೀತಿಯ ಉಪಮೇಯರ್ ಸೇರಿದಂತೆ ಸರ್ಕಾರಿ ಅಧಿಕಾರಿಗಳ ಜೊತೆಗೆ ಸಭೆಗಳನ್ನು ನಡೆಸಲಾಯಿತು.
25,000 ಕೋಟಿ ರೂ. ಬಂಡವಾಳ
ದಕ್ಷಿಣ ಕೊರಿಯಾದಲ್ಲಿ ನಡೆದ ಸಭೆಗಳಲ್ಲಿ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್, ಎಲ್‌ಜಿ ಎನರ್ಜಿ ಸೊಲ್ಯೂಷನ್ಸ್, ಎಲ್‌ಎಕ್ಸ್ ಎಲೆಕ್ಟ್ರಾನಿಕ್ಸ್, ನಿಫ್ಕೊ ಕೊರಿಯಾ, ಒಸಿಐ ಹೋಲ್ಡಿಂಗ್ಸ್, ಕ್ರಾಫ್ಟನ್, ಎಚ್‌ವೈಎಸಿ, ಹುಂಡೈ ಮೋಟರ್ಸ್, ವೈಜಿ-೧, ಹೊಯ್ಸಂಗ್ ಅಡ್ವಾನ್ಸಡ್ ಮಟೇರಿಯಲ್ಸ್ ಮುಂತಾದವು ಸೇರಿವೆ.
ತಕ್ಷಣದ ಈ ಹೂಡಿಕೆಗಳನ್ನು ಹೊರತುಪಡಿಸಿ, ವಾಹನ ತಯಾರಿಕೆ, ಎಲೆಕ್ಟ್ರಾನಿಕ್ಸ್ ಮತ್ತು ಇಂಧನ ಪರಿಹಾರ ವಲಯಗಳಲ್ಲಿ 25,000 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ ಸಾಧ್ಯತೆಗಳನ್ನೂ ರಾಜ್ಯ ನಿಯೋಗ ಗುರುತಿಸಿದೆ. ಈ ಹೂಡಿಕೆ ನಿರೀಕ್ಷೆ, ಕರ್ನಾಟಕ ಜಾಗತಿಕ ಹೂಡಿಕೆದಾರರ ಪಾಲಿಗೆ ಆಕರ್ಷಕ ತಾಣವಾಗಿರುವುದರ ಮಹತ್ವ ಸೂಚಿಸುತ್ತದೆ ಎಂದರು.