ಶುಕ್ರವಾರ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ
ಬೆಂಗಳೂರು:ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಹಾಗೂ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೨೨ರ ಜನವರಿ ೧೨ರಂದು ಕ್ರಯಪತ್ರ ಆಗಿದ್ದು, ಮುಖ್ಯಮಂತ್ರಿ ಅವರ ಪತ್ನಿ ಪಾರ್ವತಮ್ಮ ಅವರಿಗೆ 1991ರ ಕಾನೂನು ಪ್ರಕಾರ 4,800 ಚದರಡಿ ಜಾಗ ಅಂದರೆ, 40×60ರ ಎರಡು ನಿವೇಶನಗಳನ್ನು ಮಾತ್ರ ಹಂಚಿಕೆ ಮಾಡಬೇಕಿತ್ತು, 14 ನಿವೇಶನಗಳನ್ನು ಹಂಚಿಕೆ ಮಾಡಿರುವುದು ಸಂಪೂರ್ಣ ಕಾನೂನುಬಾಹಿರ ಎಂದರು.
1992ರಲ್ಲೇ ಭೂಸ್ವಾಧೀನ
1992ರಲ್ಲೇ ಭೂಸ್ವಾಧೀನ ಆರಂಭವಾಗಿದೆ, 2004ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಅವರ ಅಣ್ಣ ಜಮೀನು ಖರೀದಿ ಮಾಡಿದ್ದಾರೆ, ಮುಡಾ ಸ್ವಾಧೀನದಲ್ಲಿದ್ದ ಜಾಗ ಮಲ್ಲಿಕಾರ್ಜುನ ಸ್ವಾಮಿ ಖರೀದಿ ಮಾಡಲು ಹೇಗೆ ಸಾಧ್ಯ.
ಪಾರ್ವತಮ್ಮ ಅವರ ಸಹೋದರ ಮಲ್ಲಿಕಾರ್ಜುನಸ್ವಾಮಿ 2009-10ರಲ್ಲಿ ದಾನಪತ್ರ ಮಾಡಿದಾಗಲೂ ಈ ಜಾಗ ಮುಡಾ ಸ್ವಾಧೀನದಲ್ಲಿತ್ತು, ಭೂಪರಿವರ್ತನೆ ಸಹಾ ಆಗಿತ್ತು, ದಾನಪತ್ರ ಮಾಡುವಾಗಲೂ ಕೃಷಿ ಭೂಮಿ ಆಗಿರಲಿಲ್ಲ, ಇಲ್ಲೂ ಸಹಾ ತಪ್ಪು ಮಾಹಿತಿ ನೀಡಲಾಗಿದೆ.
ಸಿದ್ದರಾಮಯ್ಯ ತಪ್ಪು ಮಾಹಿತಿ
ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು ಅನೇಕ ತಪ್ಪು ಮಾಹಿತಿ ನೀಡಿದ್ದಾರೆ, ಮುಖ್ಯಮಂತ್ರಿಗಳ ಮುಖವಾಡ ಕಳಚಿಬಿದ್ದಿದೆ, ಬೆಲೆಬಾಳುವ ನಿವೇಶನಗಳನ್ನು ಹೇಗಾದರೂ ಕಬಳಿಸಬೇಕೆಂಬ ಉದ್ದೇಶದಿಂದ ನಿಯಮ ಗಾಳಿಗೆ ತೂರಿ ಅಕ್ರಮ ನಡೆಸಲಾಗಿದೆ.
ಮೈಸೂರಿನ ಕೆಸರೇಗ್ರಾಮದ 3.16 ಎಕರೆ ಜಮೀನಿಗೆ ಬದಲಾಗಿ ತಮ್ಮ ಪತ್ನಿಗೆ 14 ನಿವೇಶನ ಮಂಜೂರು ಮಾಡಿಸಿಕೊಂಡಿದ್ದಾರೆ, ಮುಡಾದಿಂದ ಭೂಸ್ವಾಧೀನಕ್ಕೆ ಬದಲಾಗಿ ಕೇವಲ 18 ಕೋಟಿ ರೂ. ಮೌಲ್ಯದ ನಿವೇಶನಗಳು ಲಭಿಸಿವೆ, ನಿಯಮದ ಪ್ರಕಾರ 62 ಕೋಟಿ ರೂ. ಮೌಲ್ಯದ ನಿವೇಶನಗಳು ನೀಡಬೇಕಿತ್ತು ಎಂದು ಮುಖ್ಯಮಂತ್ರಿ ತಪ್ಪು ಮಾಹಿತಿ ಕೊಟ್ಟಿದ್ದಾರೆ.
ಚುನಾವಣಾ ಆಯೋಗಕ್ಕೆ ದೂರು
ಸಿದ್ದರಾಮಯ್ಯ ಅವರು 2013ರ ತಮ್ಮ ಚುನಾವಣಾ ಪ್ರಮಾಣಪತ್ರದಲ್ಲಿ 3.16 ಎಕರೆ ಭೂಮಿ ಬಗ್ಗೆ ಉಲ್ಲೇಖಿಸಿಲ್ಲ, ಇದು ಚುನಾವಣೆ ನಿಯಮಗಳ ಉಲ್ಲಂಘನೆಯಾಗಿದ್ದು, ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಎಲ್ಲ ಬಡ ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು 2 ಸಾವಿರ ರೂ. ಕೊಡುವುದಾಗಿ ಗ್ಯಾರಂಟಿಗಳ ವಾಗ್ದಾನ ಮಾಡಿದ್ದರು, ಆದರೆ, ತಮ್ಮ ಪತ್ನಿಗೆ 2 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 14 ನಿವೇಶನಗಳನ್ನು ಕೊಟ್ಟಿದ್ದಾರೆ, ಪತ್ನಿ ಹೆಸರಿನಲ್ಲಿ 64 ಕೋಟಿ ರೂ.ಗಳಿಗೂ ಹೆಚ್ಚು ಬೆಲೆಯ ನಿವೇಶನಗಳನ್ನು ಪಡೆದಿರುವ ಬಗ್ಗೆ ರಾಜ್ಯದ ಜನ ಪ್ರಶ್ನೆ ಮಾಡುತ್ತಿದ್ದು, ಮುಖ್ಯಮಂತ್ರಿ ಉತ್ತರ ನೀಡಬೇಕು, ಹಗರಣದ ಹೊಣೆ ಹೊರಬೇಕು.
ಸಿದ್ದರಾಮಯ್ಯ ಅವರು ತಮ್ಮ ಆಡಳಿತಾವಧಿಯಲ್ಲೇ ಅವ್ಯವಹಾರ ನಡೆಸಿ, ತಾವೇ ಪರಿಹಾರ ಕೇಳಿರುವ ಮೊದಲ ಮುಖ್ಯಮಂತ್ರಿ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ ಎಂದರು.
ಮುಡಾದಲ್ಲಿ 2 ಹಗರಣ
ಮುಡಾದಲ್ಲಿ 2 ಹಗರಣಗಳು ನಡೆದಿವೆ, ಮುಖ್ಯಮಂತ್ರಿ ಅವರ ಧರ್ಮಪತ್ನಿಗೆ ಹಂಚಿಕೆ ಮಾಡಿದ 14 ನಿವೇಶನ ಒಂದು ಪ್ರಕರಣವಾದರೆ, ಈ ಮಾಹಿತಿ ಬಹಿರಂಗವಾಗುತ್ತಿದ್ದಂತೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ತರಾತುರಿಯಲ್ಲಿ ಮೈಸೂರಿಗೆ ಧಾವಿಸಿ ಮುಡಾ ಅಧಿಕಾರಿಗಳ ಸಭೆ ನಡೆಸಿ, ಮಾಹಿತಿ ಪಡೆದು ಎಲ್ಲ ಅಧಿಕಾರಿಗಳನ್ನೂ ಏಕಾಏಕಿ ವರ್ಗಾವಣೆ ಮಾಡಿರುವುದು ಇನ್ನೊಂದು ಹಗರಣವಾಗಿದೆ ಎಂದರು.
ಮುಡಾ ಭ್ರಷ್ಟಾಚಾರ ಹಗರಣದ ತನಿಖೆ ನಡೆಸಿ ವರದಿ ನೀಡಿದ ಜಿಲ್ಲಾಧಿಕಾರಿಯನ್ನೂ ತರಾತುರಿಯಲ್ಲಿ ವರ್ಗಾವಣೆ ಮಾಡಲಾಗಿದೆ, ಸಚಿವ ಭೈರತಿ ಸುರೇಶ್, ಹಗರಣ ಮುಚ್ಚಿ ಹಾಕಲು ಎಲ್ಲ ಕಡತಗಳನ್ನು ಬೆಂಗಳೂರಿಗೆ ಒಯ್ದಿದ್ದಾರೆ ಎಂದು ಆರೋಪಿಸಿದರು.
ಒಟ್ಟಾರೆಯಾಗಿ ಮುಡಾದಲ್ಲಿ 5 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ನಿವೇಶನಗಳ ಅಕ್ರಮ ಹಂಚಿಕೆ ನಡೆದಿದೆ, ಹಗರಣದಲ್ಲಿ ಶಾಮೀಲಾದವರನ್ನು ಶಿಕ್ಷಿಸುವ ಬದಲು ರಕ್ಷಿಸಲು ಸಚಿವ ಭೈರತಿ ಸುರೇಶ್ ಮುಂದಾಗಿದ್ದಾರೆ.
ಬಡವರಿಗೆ ನಿವೇಶನ ಹಂಚಬೇಕು
ವಿವಾದಿತ ನಿವೇಶನ ಹಂಚಿಕೆ ರದ್ದು ಮಾಡಿ, ಅರ್ಹ ಬಡವರಿಗೆ ನಿವೇಶನ ಹಂಚಬೇಕು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಮೇಲೆ ಆರೋಪ ಇರುವ ಕಾರಣ ಮತ್ತೊಂದು ಎಸ್‌ಐಟಿ ಮಾಡಿ ತನಿಖೆ ನಡೆಸುವುದು ಸೂಕ್ತವಲ್ಲ, ಈ ಭಾರಿ ಮೊತ್ತದ ಹಗರಣದ ತನಿಖೆಯನ್ನು ತಕ್ಷಣವೇ ಸಿಬಿಐಗೆ ಕೊಡಬೇಕು.
ಮುಡಾ ಅವ್ಯವಹಾರಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿಗಳ ವರದಿ ಬಳಿಕವೂ 15-6-2024ರಲ್ಲಿ ಸುಮಾರು 42 ಸೈಟ್‌ಗಳನ್ನು ಒಬ್ಬರಿಗೆ ಬದಲಿಯಾಗಿ ಕೊಟ್ಟಿದ್ದಾರೆ, ಇಂಥ ಸಾವಿರಾರು ನಿವೇಶನಗಳನ್ನು ಸರ್ಕಾರ ಕಾನೂನುಬಾಹಿರವಾಗಿ ಕೊಟ್ಟಿದೆ, ಬಡವರು, ದಲಿತರು, ಪರಿಶಿಷ್ಟ ಸಮುದಾಯಕ್ಕೆ ಮೀಸಲಿಟ್ಟ ನಿವೇಶನಗಳನ್ನು ತಮಗೆ ಬೇಕಾದಂತೆ ಹಂಚಿಕೆ ಮಾಡಿದ್ದಾರೆ.
ಮುಡಾದಲ್ಲಿನ ಭೂಹಗರಣವನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದ್ದು, ಬಿಜೆಪಿ ಜುಲೈ 12ರಂದು (ಶುಕ್ರವಾರ) ಮೈಸೂರಿನಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಲಿದೆ, ವಿಧಾನಸಭೆಯಲ್ಲಿನ ವಿರೋಧಪಕ್ಷದ ನಾಯಕ ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ್, ಶಾಸಕರು, ಕಾರ್ಯಕರ್ತರು ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ದಲಿತರಿಗೆ ಮೀಸಲಿಟ್ಟ ಹಣ
ವಾಲ್ಮೀಕಿ ನಿಗಮದಲ್ಲಿ ದಲಿತರಿಗೆ ಮೀಸಲಿಟ್ಟ ಹಣವನ್ನು ಚುನಾವಣೆಗೆ ಬಳಸಿಕೊಂಡಿದ್ದಾರೆ, ಬಿಜೆಪಿ ಪ್ರತಿಭಟನೆಯಿಂದಾಗಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದದ್ದಲ್ ಹಾಗೂ ನಾಗೇಂದ್ರ ಅವರನ್ನು ಎಸ್‌ಐಟಿ ವಿಚಾರಣೆಗೆ ಕರೆಯಿತು.
ಎಸ್‌ಐಟಿ ನಿಧಾನವಾಗಿ ಕೆಲಸ ಮಾಡುತ್ತಿದೆ, ರಾಜ್ಯ ಸರ್ಕಾರ ಸಚಿವರು, ಶಾಸಕರ ರಕ್ಷಣೆಗೆ ಮುಂದಾಗಿತ್ತು, ಹಗರಣವನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಿಬಿಐಗೆ ವಹಿಸಿದ ನಂತರ ಗಂಭೀರ ಸ್ವರೂಪ ಪಡೆದುಕೊಂಡಿದೆ ಎಂದರು.