ಬೆಂಗಳೂರು:ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಮುಡಾ ಹಗರಣದ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಸಿದ್ದು, ಸದನದಲ್ಲೂ ಈ ಬಗ್ಗೆ ಗಂಭೀರ ಚರ್ಚೆ ನಡೆಸಲಾಗುವುದು ಎಂದು ವಿಧಾನಸಭೆಯಲ್ಲಿನ ವಿರೋಧ ಪ್ರತಿಪಕ್ಷ ನಾಯಕ ಆರ್.ಅಶೋಕ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಭ್ರಷ್ಟಾಚಾರ ವಿರುದ್ಧ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಭಾಗಿಯಾದ ಮುಡಾ ಹಗರಣ ಕುರಿತು ಮಾತನಾಡಲು ಸದನದಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆ ಮಂಡಿಸಲಾಗುವುದು, ಜುಲೈ 15ರಿಂದ ನಡೆಯಲಿರುವ ವಿಧಾನಮಂಡಲದ ಅಧಿವೇಶನವನ್ನು ಇನ್ನೂ ಒಂದು ವಾರ ವಿಸ್ತರಣೆ ಮಾಡಲು ಆಗ್ರಹಿಸಲಾಗುವುದು ಎಂದರು.
ರೈತರ ಆತ್ಮಹತ್ಯೆ ಪ್ರಕರಣಗಳು
ರಾಜ್ಯದಲ್ಲಿ ಝೀಕಾ ವೈರಸ್, ಡೆಂಘೀ ರೋಗಗಳು ಹೆಚ್ಚಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ, ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಬೇಕೆಂದು ಆಗ್ರಹಿಸಿದರೂ ಅದರ ಬಗ್ಗೆ ಗಮನಹರಿಸಿಲ್ಲ, ಅಗತ್ಯ ಸಾಮಗ್ರಿಗಳ ಹಾಗೂ ಬಿತ್ತನೆ ಬೀಜಗಳ ದರ ಏರಿಕೆಯಿಂದಾಗಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಿವೆ.
ರಾಜ್ಯದಲ್ಲಿ ಹಿಂದೂಗಳ ಮೇಲೆ ಹಲ್ಲೆಗಳು ನಡೆಯುತ್ತಿವೆ, ಇಲಾಖೆಗಳ ಅನುದಾನ ಕಡಿತ, 700 ಕೋಟಿ ರೂ. ಹಾಲು ಪ್ರೋತ್ಸಾಹಧನ ಬಾಕಿ ಮೊದಲಾದ ಸಮಸ್ಯೆಗಳು ಎದುರಾಗಿದ್ದು, ಆಡಳಿತಕ್ಕೆ ಬಂದ ಒಂದೇ ವರ್ಷದಲ್ಲಿ ಕಾಂಗ್ರೆಸ್ ಶಿಶುಪಾಲನಂತೆ ನೂರು ತಪ್ಪುಗಳನ್ನು ಮಾಡಿದೆ ಎಂದು ದೂರಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಕಾಂಗ್ರೆಸ್‌ನ ಯಾರೂ ಭಾಗಿಯಾಗಿಲ್ಲ ಎಂದು ಹೇಳಿಕೊಂಡಿತ್ತು, ಆದರೀಗ ಜಾರಿ ನಿರ್ದೇಶನಾಲಯ ದಾಳಿ ಮಾಡಿದೆ, ಎಸ್‌ಐಟಿ ತನಿಖೆ ನೆಪದಲ್ಲಿ ಎಲ್ಲರಿಗೂ ಕ್ಲೀನ್‌ಚಿಟ್ ನೀಡುವ ಪ್ರಯತ್ನ ನಡೆದಿದೆ, ಇದರಲ್ಲಿ ಇನ್ನೂ ಮೂವರು ಸಚಿವರು ಶಾಮೀಲಾಗಿದ್ದಾರೆ, ನಿಗಮದ ಅಧ್ಯಕ್ಷರೇ ಖಾಸಗಿ ಹೋಟೆಲ್ ಒಂದರಲ್ಲಿ ಸಭೆ ಸೇರಿದ ಬಗ್ಗೆ ಹೇಳಿಕೆ ನೀಡಿದ್ದಾರೆ, ಈ ಕುರಿತ ಆಡಿಯೋದಲ್ಲಿ ಎಲ್ಲವೂ ಬಹಿರಂಗಗೊಂಡಿದೆ ಎಂದರು.
ದಲಿತರಿಗೆ ಮೀಸಲಿಟ್ಟ ಹಣ ಲೂಟಿ
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಲೂಟಿಯಾದ 187 ಕೋಟಿ ರೂ. ದಲಿತ ಕಾಲೋನಿಗೆ ರಸ್ತೆ, ಮನೆ ನಿರ್ಮಿಸಲು ಮೀಸಲಾಗಿತ್ತು, ದಲಿತರಿಗೆ ಮೀಸಲಿಟ್ಟ ಹಣ ಗ್ಯಾರಂಟಿಗೆ ಬಳಸಿದ್ದು, ಇದು ದೊಡ್ಡ ಲೂಟಿಯ ಪ್ರಯತ್ನ, ಇದರ ವಿರುದ್ಧವೂ ಹೋರಾಟ ನಡೆಸಲಾಗುವುದು.
ರಾಮನಗರ ಜಿಲ್ಲೆಗೆ ಸ್ಥಳ ಮಹಿಮೆ ಇದೆ, ಈ ಹೆಸರನ್ನು ಕಾಂಗ್ರೆಸ್ ನಾಯಕರು ಇಟ್ಟಿಲ್ಲ, ಇದನ್ನು ಬದಲಿಸಲು ಅವರಿಗೆ ಯಾವುದೇ ಹಕ್ಕು ಇಲ್ಲ, ಕರ್ನಾಟಕದಲ್ಲಿ ರಾಮ-ಕೃಷ್ಣ ಎಂಬ ಊರುಗಳ ಹೆಸರುಗಳನ್ನೂ ಬದಲಾಯಿಸುತ್ತಾರಾ, ಶೋಲೆ ಸಿನಿಮಾ ಚಿತ್ರೀಕರಣವಾದಾಗಲೂ ಆ ಪ್ರದೇಶಕ್ಕೆ ರಾಮಘಡ ಎಂಬ ಹೆಸರನ್ನೇ ಇಟ್ಟಿದ್ದರು.
ಹೆಸರು ಬದಲಾಯಿಸುವ ಬದಲು ಬೆಂಗಳೂರು ನಗರದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲಿ, ರಾಮನ ಮೇಲೆ ದ್ವೇಷ ಇದ್ದರೆ ಬೇರೆ ದಾರಿ ನೋಡಿಕೊಳ್ಳಲಿ, ಆಯಾಯ ಜಿಲ್ಲೆಗೆ ಅದರದ್ದೇ ಆದ ಘನತೆ ಇದೆ, ಹುಚ್ಚರಂತೆ, ತುಘಲಕ್‌ನಂತೆ ಎಲ್ಲವನ್ನೂ ಬೆಂಗಳೂರಿಗೆ ಸೇರಿಸಬಾರದು ಎಂದು ಎಚ್ಚರಿಕೆ ನೀಡಿದರು.