ಮೈಸೂರು:ಮುಡಾ ನಿವೇಶನ ಹಂಚಿಕೆ ವಿಷಯದಲ್ಲಿ ಬಿಜೆಪಿ ರಾಜಕೀಯ ಕಾರಣಕ್ಕೆ ಆರೋಪ ಮಾಡುತ್ತಿದ್ದು, ಇಂಥ ಷಡ್ಯಂತ್ರಕ್ಕೆ ಹೆದರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾಗಿರುವುದು ಬಿಜೆಪಿಯವರಿಗೆ ಹೊಟ್ಟೆಯುರಿ, ಅದಕ್ಕಾಗಿ ಕುತಂತ್ರ ಮಾಡುತ್ತಿದ್ದಾರೆ ಎಂದರು.
ನಮಗೂ ರಾಜಕೀಯ ಪ್ರತಿರೋಧ ತಿಳಿದಿದೆ
ಬಿಜೆಪಿ ರಾಜಕೀಯ ಪ್ರತಿಭಟನೆ ಮಾಡುತ್ತಿದೆ, ರಾಜ್ಯಾಧ್ಯಕ್ಷ ವಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲೇ ನಡೆಯಲಿ, ಜೆ.ಪಿ.ನಡ್ಡಾ ಅವರ ಅಧ್ಯಕ್ಷತೆಯಲ್ಲಿಯೇ ಪ್ರತಿಭಟನೆ ಮಾಡಲಿ, ನಮಗೂ ರಾಜಕೀಯ ಪ್ರತಿರೋಧ ನೀಡಲು ತಿಳಿದಿದೆ.
ಮುಡಾ ಮೊದಲಿನಿಂದಲೂ ಗಬ್ಬೆದ್ದು ಹೋಗಿದೆ, ಅದನ್ನು ಸ್ವಚ್ಛ ಮಾಡಬೇಕಿದೆ, ನಮಗೆ ಬದಲಿ ನಿವೇಶನ ಹಂಚಿಕೆ ಪ್ರಕರಣ ಹಗರಣವಲ್ಲ, ನಮ್ಮ ಜಮೀನು ಬಳಕೆ ಮಾಡಿದ್ದಾರೆ, ಪ್ರಕರಣದಲ್ಲಿ ಭೂಮಿ ಕಳೆದುಕೊಂಡವರಿಗೆ 50:50 ಅನುಪಾತದಲ್ಲಿ ಜಮೀನು ಕೊಟ್ಟಿದ್ದಾರೆ, ನಿವೇಶನ ಮಾಡಿದರೆ ಮೊದಲು 60:40 ಅನುಪಾತವಿತ್ತು, ಈಗ 50:50 ಮಾಡಿದ್ದಾರೆ, ಇದನ್ನು ಯಾರು ಮಾಡಿದ್ದು ಎಂದು ಪ್ರಶ್ನಿಸಿದರು.
ತನಿಖೆ ನಡೆಸಿ ಸರಿ ಮಾಡುತ್ತೇವೆ
ಮುಡಾ ಅಲ್ಲದೇ ಇತರೆ ಅಭಿವೃದ್ಧಿ ಪ್ರಾಧಿಕಾರಗಳಲ್ಲಿಯೂ 2020ರಲ್ಲಿ 50:50ರ ಅನುಪಾತ ಜಾರಿಗೆ ಬಂದಿದೆ, ಇದರಿಂದ ಅಭಿವೃದ್ಧಿ ಪ್ರಾಧಿಕಾರಗಳಿಗೆ ಲಾಭವೇ ಹೊರತು ನಷ್ಟ ಇಲ್ಲ, ಭೂಮಾಲೀಕರಿಗೆ ನಷ್ಟ ಆಗಬಾರದು, ಇದನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ, ಇದನ್ನು ತಡೆಯಲು ತನಿಖೆ ನಡೆಸಿ ಸರಿ ಮಾಡುತ್ತೇವೆ.
ಚುನಾವಣಾ ಪ್ರಮಾಣಪತ್ರದಲ್ಲಿನ ವಿವರಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ನೋಟೀಸ್ ನೀಡಿದರೆ ಉತ್ತರ ಕೊಡುತ್ತೇವೆ ಎಂದರು.