ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಹಗರಣ
ಬೆಂಗಳೂರು : ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಅಕ್ರಮ ವರ್ಗಾವಣೆ ಹಗರಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಘರ್ಷಣೆಗೆ ಕಾರಣವಾಗಿದೆ.
ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಕಳೆದ ಎರಡು ದಿನದಿಂದ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಆರೋಪಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶ ಪಡಿಸಿಕೊಂಡು ಕೆಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಆದರೆ, ನಿಮಗದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಕಡತಗಳು ಎಸ್‌ಐಟಿ ವಶದಲ್ಲಿವೆ.
ಇಡಿ ಅಧಿಕಾರಿಗಳು ನಿನ್ನೆ ನಿಗಮದ ಕಚೇರಿ ಮೇಲಿನ ದಾಳಿ ಸಂದರ್ಭದಲ್ಲಿ ತನಿಖೆಗೆ ನಿಗಮದ ಸಿಬ್ಬಂದಿ ಸಹಕರಿಸದ ಹಿನ್ನೆಲೆಯಲ್ಲಿ ಬಲವಂತವಾಗಿ ಕಪಾಟುಗಳನ್ನು ಒಡೆದು ಕೆಲವು ದಾಖಲೆಗಳನ್ನು ವಶಕ್ಕೆ ಪಡೆದರು.
ಆದರೆ, ಈ ದಾಖಲೆಗಳು ಮಹತ್ವದ್ದಲ್ಲವೆಂದು ಅರಿತ ಇಡಿ ಅಧಿಕಾರಿಗಳು, ನಿಗಮದ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, ಎಲ್ಲಾ ಕಡತಗಳು ಎಸ್‌ಐಟಿ ವಶದಲ್ಲಿವೆ ಎಂಬ ಮಾಹಿತಿ ನೀಡಿದ್ದಾರೆ.
ನಂತರ ಇಡಿ ಅಧಿಕಾರಿಗಳು ಎಸ್‌ಐಟಿ ಅಧಿಕಾರಿಗಳನ್ನು ಸಂಪರ್ಕಿಸಿ ದಾಖಲೆಗಳನ್ನು ತಮ್ಮ ವಶಕ್ಕೆ ನೀಡುವಂತೆ ಕೋರಿದ್ದಾರೆ.
ಇದಕ್ಕೆ, ನಾವೇ ವಿಚಾರಣೆ ನಡೆಸುತ್ತಿದ್ದು, ನಿಮಗೆ ದಾಖಲೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಸಂಸ್ಥೆ ಮುಖ್ಯಸ್ಥರು ಇಡಿ ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.
ಎಸ್‌ಐಟಿ ನೀಡಿದ ಮಾಹಿತಿಯ ಕುರಿತು ಇಡಿಯವರು ದೆಹಲಿಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಸಿಐಡಿ ಆವರಣದಲ್ಲಿರುವ ತನಿಖಾ ಸಂಸ್ಥೆ ಮೇಲೆ ದಾಳಿ ನಡೆಸಿ ದಾಖಲೆಗಳ ವಶಕ್ಕೆ ಕಾರ್ಯತಂತ್ರ ರೂಪಿಸಿದರು.
ಇದರ ಮಾಹಿತಿ ತಿಳಿಯುತ್ತಿದ್ದಂತೆ ಸಿಐಡಿ ಹಾಗೂ ಎಸ್‌ಐಟಿ ಅಧಿಕಾರಿಗಳು, ದಾಳಿ ತಡೆಯಲು ತಮ್ಮ ಕಚೇರಿ ಆವರಣಕ್ಕೆ ಕೆಎಸ್‌ಆರ್‌ಪಿ ಪ್ಲಟೂನ್‌ಗಳನ್ನು ಕರೆಸಿ ತಮ್ಮ ಭದ್ರತೆಗೆ ನಿಯೋಜಿಸಿಕೊಂಡರು.
ಮುಂಜಾನೆ 00-30ರವರೆಗೂ ಎಲ್ಲಾ ಅಧಿಕಾರಿಗಳು ಕಚೇರಿಯಲ್ಲೇ ಬೀಡು ಬಿಟ್ಟಿದ್ದರು. ಇಡಿ ಅಧಿಕಾರಿಗಳು ಬರುವುದಿಲ್ಲ ಎಂಬುದು ಮನದಟ್ಟಾದ ನಂತರ ಮನೆಗೆ ತೆರಳಿದರು.
ಇಂದೂ ಕೂಡಾ ಸಿಐಡಿ ಕಚೇರಿಗೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಇಡಿ ಅವರು ಯಾವುದೇ ಕ್ಷಣದಲ್ಲಿ ಎಸ್‌ಐಟಿ ತನಿಖಾ ಸಂಸ್ಥೆ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ.
ಕಳೆದ 10 ದಿನಗಳಿಂದ ಹಗರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆ ಇಡಿ ಅಧಿಕಾರಿಗಳು ಮಾಡಿದ ಮನವಿಗೆ ರಾಜ್ಯ ಪೊಲೀಸರು ಸ್ಪಂದಿಸಿಲ್ಲ.
ದಾಖಲೆಗಳು ದೊರೆಯದೆ ಇಡಿ, ವಿಚಾರಣೆಯನ್ನು ಪೂರ್ಣ ಪ್ರಮಾಣದಲ್ಲಿ ನಡೆಸಲೂ ಸಾಧ್ಯವಿಲ್ಲ ಹಾಗೂ ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲೂ ಆಗುತ್ತಿಲ್ಲ.
ಈ ಕಾರಣದಿಂದಲೇ ಇಡಿ ಅಧಿಕಾರಿಗಳು ಎಸ್‌ಐಟಿ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಲ್ಳಲು ಮುಂದಾಗಿದ್ದಾರೆ.
ದಾಳಿ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಅಡ್ಡಿ ಉಂಟು ಮಾಡಿದರೆ, ಅವರ ವಿರುದ್ಧವೇ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ.
ಈ ಹಿಂದೆ ಪಶ್ಚಿಮ ಬಂಗಾಳ ಹಾಗೂ ಕೇರಳದಲ್ಲೂ ಕೇಂದ್ರ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳ ನಡುವೆ ಇಂತಹದ್ದೇ ಘರ್ಷಣೆ ನಡೆದಿತ್ತು.
ಬಿಜೆಪಿಯೇತರ ಆಡಳಿತ ಇರುವ ಕರ್ನಾಟಕದಲ್ಲೂ ಇಂತಹದೇ ಘರ್ಷಣೆ ಮುಂದುವರೆದಿದೆ.