ಬೆಂಗಳೂರು: ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ನಾಯಕನಾಗಿ ಹೊರಹೊಮ್ಮುವ ಕನಸಿಗೆ ಬೆಂಗಳೂರು ಕೇಂದ್ರಬಿಂದುವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಟೆಕ್ ಶೃಂಗಸಭೆ-2024ರಲ್ಲಿ ಪಾಲ್ಗೊಳ್ಳುತ್ತಿರುವ ತಂತ್ರಜ್ಞಾನ ದಿಗ್ಗಜರೊಂದಿಗಿನ ಉಪಹಾರ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಬೆಂಗಳೂರು ಟೆಕ್ ಶೃಂಗಸಭೆ 27ನೇ ಆವೃತ್ತಿಯ ಥೀಮ್ “ಬ್ರೇಕಿಂಗ್ ಬೌಂಡರೀಸ್” ಆಗಿದ್ದು, ಹೊಸತನ ಹೆಚ್ಚಿಸಲು ವೈವಿಧ್ಯಮಯ ವಲಯಗಳ ನಡುವಿನ ಸಹಯೋಗದ ಪ್ರಾಮುಖ್ಯತೆಯನ್ನು ಥೀಮ್ ಒಳಗೊಂಡಿದೆ ಎಂದರು.
ಕರ್ನಾಟಕದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ತಂತ್ರಜ್ಞಾನ ಉದ್ಯಮವು ಪ್ರಮುಖ ಪಾತ್ರ ವಹಿಸುತ್ತಿದೆ, ನಾವೀನ್ಯತೆ ಪೋಷಿಸುವ, ಹೂಡಿಕೆ ಪ್ರೋತ್ಸಾಹಿಸುವ, ಸುಸ್ಥಿರ ಬೆಳವಣಿಗೆ ಬೆಂಬಲಿಸುವ ಪರಿಸರ ಬೆಳೆಸಲು ನಾವು ಬದ್ಧ.
ಜಿಡಿಪಿಗೆ ಶೇಕಡ 8.2 ಕೊಡುಗೆ
ಕರ್ನಾಟಕ ಭಾರತದ ನಾಲ್ಕನೇ ಅತಿದೊಡ್ಡ ರಾಜ್ಯವಾಗಿದ್ದು, ದೇಶದ ಜಿಡಿಪಿಗೆ ಶೇಕಡ 8.2 ಕೊಡುಗೆ ನೀಡುತ್ತಿದೆ, ಉದ್ಯಮಿಗಳು ಮತ್ತು ವಹಿವಾಟುದಾರರಿಗೆ ಬೆಂಗಳೂರು ಸ್ವರ್ಗವಾಗಿದೆ, ಸ್ಟಾರ್ಟ್‌ಅಪ್, ಐಟಿ, ಎವಿಜಿಸಿ, ಬಯೋಟೆಕ್ನಾಲಜಿ ಮತ್ತು ಇಎಸ್‌ಡಿಎಂ ಗಳಲ್ಲಿ ವಲಯ ನೀತಿ ಹೊಂದಿರುವ ಮೊದಲ ರಾಜ್ಯ ಕರ್ನಾಟಕ ಎಂದರು.
ರಾಜ್ಯ ಸರ್ಕಾರದ ಮುಂಬರುವ ಜಿಸಿಸಿ ನೀತಿಯು ನಿಯಮಾವಳಿಗಳ ಸಡಿಲಿಕೆಯನ್ನು ಕೇಂದ್ರೀಕರಿಸಲಿದೆ, ವಿಶೇಷವಾಗಿ ಬೆಂಗಳೂರಿನ ಹೊರಗೆ ಘಟಕ ಸ್ಥಾಪನೆಗೆ ದೊಡ್ಡ ಕಂಪನಿಗಳನ್ನು ಉತ್ತೇಜಿಸುತ್ತದೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ), ಮೆಷಿನ್ ಲರ್ನಿಂಗ್, ಇಂಟರ್ನೆಟ್ ಆಫ್ ಥಿಂಗ್ಸ್, ಬ್ಲಾಕ್‌ಚೈನ್ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್, ಡಿಜಿಟಲ್ ವಿಕಾಸದ ಮುಂದಿನ ಹಾದಿಯಾಗಿದೆ.
ದೃಢವಾದ ಮೂಲಸೌಕರ್ಯ, ನುರಿತ ಕಾರ್ಯಪಡೆ, ನಾವೀನ್ಯತೆ ಮತ್ತು ಬೆಳವಣಿಗೆ ಉತ್ತೇಜಿಸುವ ನಿಯಂತ್ರಕ ಚೌಕಟ್ಟು ರಚಿಸಲು ಒಟ್ಟಾಗಿ ಶ್ರಮಿಸೋಣ, ಕರ್ನಾಟಕವನ್ನು ನಿರ್ವಿವಾದದ ನಾಯಕನನ್ನಾಗಿ ಮಾಡೋಣ.
ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಸಮಾವೇಶ
ಕಳೆದ 26 ವರ್ಷಗಳಿಂದ ತಂತ್ರಜ್ಞಾನ ಮತ್ತು ನಾವೀನ್ಯತೆಗಳನ್ನು ಒಟ್ಟುಗೂಡಿಸಲು ಪರಿಣಾಮಕಾರಿ ವೇದಿಕೆ ಒದಗಿಸುತ್ತಿದೆ. ಬೆಂಗಳೂರು ಟೆಕ್ ಸಮ್ಮೇಳನ ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಸಮಾವೇಶವಾಗಿದ್ದು, ನವೆಂಬರ್ 19 ರಿಂದ 21 ರವರೆಗೆ ನಡೆಯಲಿದೆ ಎಂದರು.
ಈ ವರ್ಷ ಹೊಸ ಇಎಸ್‌ಡಿಎಂ ಟ್ರ್ಯಾಕ್ ಅನ್ನು ಪರಿಚಯಿಸುತ್ತಿದ್ದು, ಇದು ಹೊಸಯುಗದ ಆರ್ಥಿಕತೆಯ ಆಧಾರ ಸ್ತಂಭಗಳಾಗಿರುವ ತಾಂತ್ರಿಕ ನಾವೀನ್ಯತೆ ಮತ್ತು ಉತ್ಪಾದನಾ ಸಾಮರ್ಥ್ಯದ ಸಂಗಮದಲ್ಲಿದೆ, ಬೆಂಗಳೂರು ಟೆಕ್ ಕೇವಲ ಸಾಮರ್ಥ್ಯಗಳನ್ನು ಪ್ರದರ್ಶಿಸುವ ವೇದಿಕೆಯಾಗಿರದೆ, ಉಜ್ವಲವಾದ, ಹೆಚ್ಚು ತಾಂತ್ರಿಕವಾಗಿ ಮುಂದುವರಿದ ಭವಿಷ್ಯದತ್ತ ಮುನ್ನಡೆಸಬಲ್ಲ ವಿಚಾರಗಳಾಗಿದೆ ಎಂದರು.