ಬೆಂಗಳೂರು:ಮೈಸೂರು ಮುಡಾ ಹಗರಣ ಪ್ರತಿಭಟಿಸಿ ಮೈಸೂರು ಚಲೋ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ಬಂಧನ ಖಂಡನೀಯ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಂದಿಲ್ಲಿ ಟೀಕಿಸಿದ್ದಾರೆ.
ಮೈಸೂರಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗ್ಗೆ 7 ಗಂಟೆಯಿಂದಲೇ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರುಗಳನ್ನು ಬಂಧಿಸುತ್ತಿದ್ದಾರೆ, ನೈಸ್ ರಸ್ತೆ ಬಳಿ ಪಕ್ಷದ ಬ್ಯಾನರ್, ಬಾವುಟಗಳನ್ನಲ್ಲದೆ, ಕಾರ್ಯಕರ್ತರಿಗಾಗಿ ತಂದಿದ್ದ ಉಪಹಾರವನ್ನೂ ಕಾಲಿನಿಂದ ಒದ್ದು ಎಸೆದಿದ್ದಾರೆ ಎಂದರು.
ಮುಖ್ಯಮಂತ್ರಿ ಆದೇಶದ ಮೇರೆಗೆ ಬಂಧನ
ಮೈಸೂರಿನ ಮುಡಾ ಎದುರು ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧದ ಪ್ರತಿಭಟನೆ ಮುಂದಾದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರನ್ನು ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಪೊಲೀಸರು ಬಂಧಿಸಿದ್ದು, ಪ್ರತಿಭಟನೆ ಹತ್ತಿಕ್ಕುವ ಕೆಲಸ ನಡೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾಮಾಣಿಕರಾಗಿದ್ದರೆ, ಜಿಲ್ಲಾಧಿಕಾರಿಗಳ ವರದಿ ನಂತರವೂ ಮುಡಾದಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎನ್ನುವುದಾದರೆ, ನಿಷ್ಪಕ್ಷಪಾತ ತನಿಖೆಗೆ ಪ್ರಕರಣವನ್ನು ಸಿಬಿಐಗೆ ವಹಿಸಲಿ, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ.
ದಬ್ಬಾಳಿಕೆಗೆ ಹೆದರುವುದಿಲ್ಲ
ಸಿದ್ದರಾಮಯ್ಯ ಸರ್ಕಾರದ ದಬ್ಬಾಳಿಕೆಗಳಿಗೆ ಬಿಜೆಪಿ ಕಾರ್ಯಕರ್ತರು ಹೆದರುವುದಿಲ್ಲ, ಸರ್ಕಾರದ ಪಾಪದ ಕೊಡ ತುಂಬಿದೆ, ಯಾವುದೇ ಕ್ಷಣದಲ್ಲಿ ಪತನವಾಗಲಿದೆ ಎಂದರು.
ಮುಡಾ ಮೂಲಕ ಸಿದ್ದರಾಮಯ್ಯ ತಮ್ಮ ಕುಟುಂಬ ಹಾಗೂ ಕಾಂಗ್ರೆಸ್ ಪುಡಾರಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಿಕೊಂಡಿದ್ದು, ಇದು 5 ಸಾವಿರ ಕೋಟಿ ರೂ.ಗಳಿಗೂ ಮೀರಿದ ಹಗರಣವಾಗಿದ್ದು, ಕಾಂಗ್ರೆಸ್ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ, ಮುಖ್ಯಮಂತ್ರಿ ರಾಜ್ಯದ ಜನತೆಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.